ನ್ಯೂಸ್

ಕಾಡು ಪ್ರಾಣಿಗಳಿಂದಾಗುವ ಅನಾಹುತ ತಡೆಗೆ ಕ್ರಮ

ಸರಗೂರು: ಸರಗೂರಿನ ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳಿಂದಾಗುವ ಅನಾಹುತವನ್ನು ತಪ್ಪಿಸಿ, ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಅಧಿಕಾರಿಗಳೊಂದಿಗೆ ರೈತ ಮುಖಂಡರ ಸಭೆ ನಡೆಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.


ಪಟ್ಟಣದ ನೂತನವಾಗಿ ನಿರ್ಮಾಣಗೊಂಡಿರುವ ರೈತ ಸಂಪರ್ಕ ಕೇಂದ್ರ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದ್ದು, ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕಿರುವುದು ಜನಪ್ರತಿನಿಧಿಗಳು, ಸರ್ಕಾರದ ಆದ್ಯ ಕರ್ತವ್ಯ. ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಲು ಅನುಕೂಲವಾಗಲೆಂದು ತಾಲೂಕಿನ ಹೋಬಳಿ ಮಟ್ಟದಲ್ಲಿ ಬಿ. ಮಟಕೆರೆ ಗ್ರಾಮದಲ್ಲಿ ಸಭೆ ಕರೆದು ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಸಿ ಪರಿಹಾರ ಕಂಡುಕೊಳ್ಳಲು ಮುಂದಾಗಲಾಗುವುದು ಎಂದು ಹೇಳಿದರು.


ತಾಲೂಕು ಕೇಂದ್ರದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕು ಅಭಿವೃದ್ಧಿಗೆ 500 ಕೋಟಿ ರೂ. ಪ್ಯಾಕೇಜ್‌ಗೆ ಮನವಿ ಮಾಡಲಾಗಿದೆ. ಹಣ ಬಿಡುಗಡೆಯಾದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲೂಕು ಅಭಿವೃದ್ಧಿಯಾಗಲಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದರು.


ವಿಧಾನಪರಿಷತ್ ಸದಸ್ಯ ಡಾ. ತಿಮ್ಮಯ್ಯ ಮಾತನಾಡಿ, ಅಧಿಕಾರಿಗಳು ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ನಗರ,ಪಟ್ಟಣ, ಕಾರ್ಖಾನೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವ ರಾಜ್ಯ ಸರ್ಕಾರ, ರೈತರ ಅಭಿವೃದ್ಧಿಗೂ ಹತ್ತು ಹಲವು ಕಾರ್ಯಕ್ರಮಗಳನ್ನು ರಾಜ್ಯ ಮಟ್ಟದಲ್ಲಿ ಮಾಡಬೇಕು. ಬೆಲೆ ನಿಗದಿ ಮಾಡುವಾಗ ರೈತರು ಮಾಡಿರುವ ಖರ್ಚು, ವೆಚ್ಚವನ್ನು ಮನದಲ್ಲಿಟ್ಟುಕೊಂಡು ಬೆಲೆ ನಿಗದಿ ಮಾಡಬೇಕು. ರೈತರ ಬೆಳೆಗೆ ರಾಷ್ಟ್ರಮಟ್ಟದಲ್ಲಿ ನ್ಯಾಯಯುತ ಬೆಲೆ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ರೈತರಿಗೆ ಕೃಷಿ ಪರಿಕರಗಳಾದ ಟಿಲ್ಲರ್ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಿದರು.


ರೈತ ಸಂಘದ ಉಪಾಧ್ಯಕ್ಷ ಗಣೇಶ್, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸದಸ್ಯರು ಎಸ್.ಎಲ್.ರಾಜಣ್ಣ, ಶ್ರೀನಿವಾಸ, ಸಣ್ಣತಾಯಮ್ಮ, ಉಮಾರಾಮಚಂದ್ರ,ನೂರಳಾಸ್ವಾಮಿ, ಶಿವಕುಮಾರ್, ಚೆಲುವ ಕೃಷ್ಣ, ರಂಗಸ್ವಾಮಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಚಿಕ್ಕವೀರನಾಯಕ, ಪಿ.ರವಿ, ಭಾಗ್ಯಲಕ್ಷ್ಮೀ, ಕಾಂಗ್ರೆಸ್ ಮುಖಂಡ ಮಂಜುನಾಥ, ಯುತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲಶಿವರಾಜು, ಪರಶಿವಮೂರ್ತಿ, ದಡದಹಳ್ಳಿ ಚಿನ್ನಸ್ವಾಮಿ, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಕಲ್ಲಂಬಾಳುನಾಗಣ್ಣ, ಪುರದಕಟ್ಟೆ ಬಸವರಾಜು, ನಾಗರಾಜು, ಸುಭಾನ್, ಸಹಾಯಕ ನಿರ್ದೇಶಕ ರಂಗಸ್ವಾಮಿ, ಕೃಷಿ ಅಧಿಕಾರಿ ಮಹೇಶ್ ಕುಮಾರ್, ಆಶಾ, ಸುಮಾ, ರಕ್ಷಿತಾ, ರೈತ ಮುಖಂಡರು ಭಾಗಿಯಾಗಿದ್ದರು.