ಎನ್.ಆರ್.ಪುರ: ಅರಣ್ಯ ಇಲಾಖೆಯವರು ಜನರ ಬದುಕು, ಕ್ಷೇಮವನ್ನು ಕಾಪಾಡುವುದರ ಜತೆಗೆ ಕಾಡು ಪ್ರಾಣಿಗಳ ರಕ್ಷಣೆಗೂ ಆದ್ಯತೆ ನೀಡಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮೆಣಸೂರು ಗ್ರಾಪಂ ಹಳೇಮಾಕೋಡು ಕಲ್ಲುಗುಡ್ಡೆಯಲ್ಲಿ ಶನಿವಾರ ಸಚಿವ ಕೆ.ಜೆ.ಜಾರ್ಜ್ ಅವರು ಕೆಪಿಟಿಸಿಎಲ್ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್) ನೀಡಿದ 12 ಲಕ್ಷ ರೂ. ಮೊತ್ತದ ಯಾಂತ್ರಿಕೃತ ಬೋಟ್ ಅನ್ನು ಭದ್ರಾ ಹುಲಿ ಯೋಜನೆ ಹೆಬ್ಬೆ ಅಭಯಾರಣ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು.
ಕಾಡು ಪ್ರಾಣಿಗಳ ಬೇಟೆ ಹಾಗೂ ಅಕ್ರಮ ಮರಸಾಗಣೆೆ ತಡೆಗಟ್ಟಲು ಅಭಯಾರಣ್ಯ ವ್ಯಾಪ್ತಿಯ ಅರಣ್ಯ ಇಲಾಖೆಯ ಮನವಿ ಮೇರೆಗೆ ಯಾಂತ್ರಿಕೃತ ದೋಣಿ ನೀಡಲಾಗಿದೆ. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ರೈತರು ಬೆಳೆದ ಬೆಳೆ ನಾಶವಾಗುತ್ತಿದೆ. ಆನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಬೇರೆ ದೇಶಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾದರೆ ಅವುಗಳನ್ನು ಕೊಲ್ಲಲು ಅವಕಾಶವಿದೆ. ಆದರೆ ಇಲ್ಲಿ ಅವಕಾಶವಿಲ್ಲದಿರುವುದರಿಂದ ಅವುಗಳನ್ನು ಅಭಯಾರಣ್ಯಕ್ಕೆ ಓಡಿಸುವ ಕೆಲಸ ಇಲಾಖೆಯವರು ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಆನೆ ಕಾರ್ಯಪಡೆಗೆ ಬೇಕಾಗಿರುವ ವಾಹನ, ಪೊಲೀಸ್ ಇಲಾಖೆಗೆ ಬೇಕಾಗಿರುವ ವಾಹನವನ್ನು ಕೊಡಿಸಲಾಗುವುದು. ಅರಣ್ಯ ಇಲಾಖೆಯವರು ಮನುಷ್ಯರು ಮತ್ತು ಪ್ರಾಣಿಸಂಕುಲ ರಕ್ಷಣೆ ಮಾಡಬೇಕು ಎಂದರು.
ಭದ್ರಾಹುಲಿ ಸಂರಕ್ಷಿತ ಪ್ರದೇಶದ ಉಪವಲಯ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀನಾ ಮಾತನಾಡಿ, ಸಚಿವ ಕೆ.ಜೆ.ಜಾರ್ಜ್ ಅವರಿಗೆ ಎರಡು ಯಾಂತ್ರೀಕೃತ ಬೋಟ್‌ಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಕೆಪಿಟಿಸಿಎಲ್ನ ಸಿಎಸ್‌ಆರ್ ನಿಧಿಯಿಂದ ಒಂದು ಯಾಂತ್ರಿಕೃತ ಬೋಟ್ ನೀಡಿದ್ದಾರೆ. ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಯಾಂತ್ರಿಕೃತ ಬೋಟ್ ಸಹಾಯವಾಗಲಿದೆ. ಅಭಯಾರಣ್ಯ ಇತರ ಅರಣ್ಯಗಳ ಡಿಎಫ್‌ಒಗಳ ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಲಾಗುವುದು. ಎಲ್ಲ ಅರಣ್ಯ ಇಲಾಖೆಗೆ ಅವಶ್ಯಕತೆಯಿದ್ದಾಗ ಬೋಟ್ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು. ವನ್ಯಜೀವಿಗಳ ಹಾಗೂ ಅರಣ್ಯ ಸಂರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಭದ್ರಾಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೇಶ್ವರ ಸ್ವಾಮೀಜಿ ಮಾತನಾಡಿ, ಅಭಯಾರಣ್ಯ ವ್ಯಾಪ್ತಿಯಲ್ಲಿ ಮರ ಕಳವು, ವನ್ಯಪ್ರಾಣಿಗಳ ಬೇಟೆ, ಮಾನವ-ಪ್ರಾಣಿ ಸಂಘರ್ಷ ತಡೆಗಟ್ಟಲು ಯಾಂತ್ರೀಕೃತ ಬೋಟ್ ಸಹಾಯಕವಾಗಲಿದೆ. ಅತಿವೃಷ್ಟಿ ಸಂದರ್ಭದಲ್ಲಿ, ಹಿನ್ನೀರಿನಲ್ಲಿ ಸಂಭವಿಸುವ ಅವಘಡಗಳನ್ನು ತಡೆಗಟ್ಟಲು ಬಳಕೆಗೆ ಬರಲಿದೆ ಎಂದರು.
ಮೆಣಸೂರು ಗ್ರಾಪಂ ಅಧ್ಯಕ್ಷೆ ರಚಿತಾ ರಮೇಶ್, ಸದಸ್ಯರಾದ ಬಿನು, ಶಿಲ್ಪಾ, ಉಮಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಬಾನು, ಉಪಾಧ್ಯಕ್ಷೆ ಉಮಾಕೇಶವ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಭದ್ರಾ ವನ್ಯಜೀವಿ ವಿಭಾಗದ ಗೌರವ್ ರವಿ, ರವಿ ಅಶೋಕ್ ಇದ್ದರು.