ನ್ಯೂಸ್

ಕಾಡಾನೆಗಳೆರೆಡು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ

ತಾಲೂಕಿನಲ್ಲಿ ಕಾಡಾನೆಗಳೆರೆಡು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ್ದು, ಎರಡು ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಇಲವಾಲ ಹೋಬಳಿಯ ಬೊಮ್ಮನಹಳ್ಳಿ ಬಳಿ ಭಾನುವಾರ ರಾತ್ರಿಯಿಂದ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದವು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳ ಚಲವಲನ ಗಮನಿಸಿ ಸೋಮವಾರ ಸಂಜೆ ಗದ್ದಿಗೆ ಬಳಿಯ ಅರಣ್ಯಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭಿಸಿದರು.

ನಾಲ್ಕೈದು ದಿನಗಳ ಹಿಂದೆ ಕೆ.ಆರ್. ಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಈ ಎರಡೂ ಕಾಡಾನೆಗಳು ಮಾರಗೌಡನಹಳ್ಳಿ, ಅಡಗೂರು ಮಾರ್ಗವಾಗಿ ಕೆ.ಆರ್. ಎಸ್ ಹಿನ್ನೀರಿಗೆ ಬಂದಿವೆ. ಈ ವೇಳೆ ಕೃಷಿ ಜಮೀನಿನ ಮೇಲೆ ದಾಳಿ ಮಾಡಿರುವ ಆನೆಗಳು ಅಪಾರ ಬೆಳೆಯನ್ನು ಹಾನಿಮಾಡಿದ್ದವು. ಬಳಿಕ ಕೆ.ಆರ್. ಎಸ್ ಹಿನ್ನೀರಿನಿಂದ ಕಗ್ಗೆರೆ, ಲಾಲದೇವನಹಳ್ಳಿ, ಡೋರ‌್ನಹಳ್ಳಿಗೆ ತೆರಳಿದ್ದ ಆನೆಗಳು ಭತ್ತದ ಬೆಳೆಯನ್ನು ಹಾನಿ ಮಾಡಿ ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ಸಂಚರಿಸಿ ಬೊಮ್ಮನಹಳ್ಳಿಯ ಕುರುಚಲು ಕಾಡಿನಲ್ಲಿ ತಂಗಿದ್ದವು.

ಆನೆಗಳನ್ನು ಕಂಡು ಭಯಭೀತಗೊಂಡ ಜನರು, ಅವುಗಳನ್ನು ಕಾಡಿಗೆ ಹಿಮ್ಮೆಟ್ಟಿಸುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಲ್ಲದೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹುಣಸೂರು ಆನೆ ಕಾರ್ಯಪಡೆ, ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಚಿರತೆ ಕಾರ್ಯಪಡೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪೋಲಿಸ್ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಆನೆಗಳನ್ನು ಎಚ್.ಡಿ. ಕೋಟೆ ತಾಲೂಕಿನ ಅರಣ್ಯ ಪ್ರದೇಶಕ್ಕೆ ಓಡಿಸುವ ಪ್ರಯತ್ನ ನಡೆಸಿದ್ದಾರೆ.