ಹನಗೋಡು: ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಕಡೇಮನುಗನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಾಟಿ ಮಾಡಿರುವ ಭತ್ತದ ಗದ್ದೆಗಳಿಗೆ ಗುರುವಾರ ರಾತ್ರಿ ಲಗ್ಗೆ ಇಟ್ಟು ಬೆಳೆ ತುಳಿದು ನಾಶಪಡಿಸಿವೆ.
ಹನಗೋಡು ಹೋಬಳಿಯ ಕಡೇಮನುಗನಹಳ್ಳಿ ಗ್ರಾಮದ ಅಮಾಸೇಗೌಡ, ಬೋರೇಗೌಡ, ಶಿವು, ರಮೇಶ್ ಅವರ ಗದ್ದೆಯಲ್ಲಿ ಭತ್ತದ ನಾಟಿ ಮಾಡಿ ಉತ್ತಮ ಬೆಳೆ ಬೆಳೆಯುವ ನೀರೀಕ್ಷೆಯಲ್ಲಿದ್ದರು. ಆದರೆ ಗ್ರಾಮದ ಕಿಕ್ಕಿರಿಕಟ್ಟೆಯ ಕಲ್ಲುಗುಂಡಿ, ಆಲದಮರದ ಕಂಡಿಯ ಅರಣ್ಯ ಭಾಗದಿಂದ ರಾತ್ರಿ ವೇಳೆ ದಾಳಿ ಮಾಡಿರುವ ಕಾಡಾನೆಗಳು ಭತ್ತದ ಗದ್ದೆಗಳನ್ನು ತುಳಿದು ನಾಶಪಡಿಸಿವೆ.
ಸ್ಥಳಕ್ಕೆ ಹುಣಸೂರು ವನ್ಯಜೀವಿ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೇ ಕಿಕ್ಕೇರಿಕಟ್ಟೆ ಮಾರ್ಗವಾಗಿ ಕಾಡಾನೆ ತಡೆ ಬೇಲಿ ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ಬೆಳೆ ನಾಶವಾಗಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರವನ್ನು ಶೀಘ್ರ ನೀಡಬೇಕು. ಆನೆ ಹಾವಳಿ ನಿಯಂತ್ರಿಸಲು ತಾತ್ಕಾಲಿಕವಾಗಿ ರಾತ್ರಿ ಕಾವಲು ಪಡೆ ನೇಮಿಸಬೇಕೆಂದು ನೊಂದ ರೈತರು ಆಗ್ರಹಿಸಿದ್ದಾರೆ.