ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮದಲ್ಲಿ ಕಾಣಿಸಿಕೊಂಡ ಎರಡು ಕಾಡಾನೆಗಳು. 
ನ್ಯೂಸ್

ಕಾಡಾನೆ ಸಂಚಾರದಿಂದ ಆತಂಕ

ಶೃಂಗೇರಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಎರಡು ಕಾಡಾನೆಗಳು ಸಂಚರಿಸುತ್ತಿದ್ದು ಗುರುವಾರ ಬೆಳಗ್ಗೆ ಮತ್ತಷ್ಟು ಕಡೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಬುಧವಾರ ಕುಂಚೆಬೈಲು ಸಮೀಪದ ಹೊಸೂರು, ಮಾರನಕೊಡಿಗೆ ಬಳಿ ಸಂಚರಿಸಿ ಭತ್ತದ ಗದ್ದೆ, ಅಡಕೆ ತೋಟಕ್ಕೆ ಹಾನಿ ಮಾಡಿ ಹಾಗೂ ರೈತರೊಬ್ಬರ ಗೇಟ್ ಧ್ವಂಸ ಮಾಡಿವೆ. ಬೇಸೂರಿನಲ್ಲಿ ಬೆಳಗ್ಗೆ ನಾಟಿ ಮಾಡಿದ್ದ ಗದ್ದೆಯಲ್ಲಿ ಸಂಚರಿಸಿದ್ದು ಗದ್ದೆಯ ಬದುವಿನ ಮೇಲೆ ಹೆಜ್ಜೆ ಗುರುತು ಕಂಡಿದೆ. ಮಧ್ಯಾಹ್ನದ ವೇಳೆಗೆ ವೈಕುಂಠಪುರದಲ್ಲಿ ಆನೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಮೈಕ್ ಮೂಲಕ ಎಚ್ಚರಿಕೆ ನೀಡಿದ್ದರು.

ಗುರುವಾರ ಕಲ್ಕಟ್ಕೆ, ನರಸಿಂಹವನ ವ್ಯಾಪ್ತಿಯಲ್ಲಿ ವಿದ್ಯಾರಣ್ಯಪುರದ ಸಮೀಪ ಕಾಣಿಸಿಕೊಂಡಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕುತೂಗೋಡು, ವೈಕುಂಠಪುರ ಹಾಗೂ ವಿದ್ಯಾರಣ್ಯಪುರ ಭಾಗದಲ್ಲಿನ ಶಾಲೆಗಳು ಹಾಗೂ ಅಂಗನವಾಡಿಗೆ ರಜೆ ಘೋಷಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಸಂಚಾರದ ಬಗ್ಗೆ ಗಮನ ಹರಿಸಿದ್ದು ಸಾರ್ವಜನಿಕರು ಯಾವುದೇ ಊಹಾಪೋಹದ ಸಂದೇಶಗಳಿಗೆ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.