ನ್ಯೂಸ್

ಕಾಡಾನೆ ದಾಳಿಯಿಂದ ಗಾಯಗೊಂಡ ರೈತ

ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೇಟಿಕುಪ್ಪೆ ಅರಣ್ಯ ವಲಯ ವ್ಯಾಪ್ತಿಯ ಹಿರೇಹಳ್ಳಿ ಬೀಟ್‌ನಲ್ಲಿ ಭಾನುವಾರ ಕಾಡಾನೆ ದಾಳಿಗೆ ರೈತ ಗಾಯಗೊಂಡಿದ್ದಾನೆ.


ತಾಲೂಕಿನ ಹಿರೇಹಳ್ಳಿ ಎ ಕಾಲನಿ ಗ್ರಾಮದ ಲೇ.ನಾಗೇಗೌಡ ಎಂಬುವರ ಪುತ್ರ ಜವರೇಗೌಡ ಗಾಯಗೊಂಡ ರೈತ. ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಣೆ ಮಾಡಲು ಶನಿವಾರ ರಾತ್ರಿ ಕಾವಲು ಕಾಯಲು ಜವರೇಗೌಡ ಇತರ ರೈತರೊಂದಿಗೆ ತೆರಳಿ, ಜಮೀನಿನ ಮರದ ಮೇಲೆ ಹಾಕಲಾಗಿದ್ದ ಅಟ್ಟಣಿಯಲ್ಲಿ ಮಲಗಿದ್ದರು. ಭಾನುವಾರ ಮುಂಜಾನೆ 4.30ರ ಸಮಯದಲ್ಲಿ ಮೇಟಿಕುಪ್ಪೆ ಅರಣ್ಯ ಪ್ರದೇಶದಿಂದ ಬಂದ ಒಂಟಿ ಸಲಗ ಬೆಳೆ ನಾಶಪಡಿಸುತ್ತಿರುವ ಶಬ್ದ ಕೇಳಿ ಎಚ್ಚರಗೊಂಡ ಜವರೇಗೌಡ, ಮರದ ಮೇಲಿಂದ ಆನೆ ಇರುವ ಕಡೆ ಟಾರ್ಚ್ ಬೆಳಕು ಬಿಟ್ಟಿದ್ದಾರೆ.


ತಕ್ಷಣ ಬೆಳಕು ಬಂದ ದಿಕ್ಕಿನ ಕಡೆ ಓಡಿ ಬಂದ ಆನೆ ಅಟ್ಟಣಿಗೆ ಹಾಕಿದ್ದ ಏಣಿಯನ್ನು ಒದ್ದು ಬಿಸಾಡಿದೆ. ಏಣಿಯ ಸಹಕಾರದಲ್ಲಿ ನಿಂತಿದ್ದ ಅಟ್ಟಣಿ ಕೆಳಕ್ಕೆ ಬಿದ್ದಿದ್ದು, ಆನೆ ದಾಳಿ ನಡೆಸಲು ಮುಂದಾಗಿದೆ. ಈ ಸಂದರ್ಭ ರೈತ ಕೂಗಾಡುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಜಮೀನಿನ ರೈತರು ಸ್ಥಳಕ್ಕೆ ದೌಡಾಯಿಸಿ ಬಂದು ಕಾಡಾನೆ ಓಡಿಸಿದ್ದಾರೆ.


ನಂತರ ರೈತರು ಈ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಗಾಯಗೊಂಡಿದ್ದ ರೈತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.