ನ್ಯೂಸ್

ಕಾಡಾನೆ ದಾಳಿಗೆ ಮುಸುಕಿನ ಜೋಳ ನಾಶ

ಹನೂರು: ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಜಮೀನೊಂದಕ್ಕೆ ಸೋಮವಾರ ಬೆಳಗಿನ ಜಾವ ಮೂರು ಕಾಡಾನೆಗಳು ಲಗ್ಗೆ ಇಟ್ಟು ದಾಂಧಲೆ ನಡೆಸಿ ನೀರಾವರಿ ಪರಿಕರ ಹಾಗೂ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ. ಕಾವಲು ಕಾಯಲು ತೆರಳಿದ್ದ ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮದ ಕನಕರಾಜ ಅವರು 2.50 ಎಕರೆ ಜಮೀನಿನಲ್ಲಿ ಮುಸುಕಿನ ಜೋಳದ ಫಸಲನ್ನು ಹಾಕಿದ್ದರು. ಕಟಾವು ಹಂತದ ತೆನೆಗಳು ಬಿಟ್ಟಿದ್ದವು. ರಾತ್ರಿ ಕಾವಲು ಕಾಯಲು ಜಮೀನಿಗೆ ತೆರಳಿದ್ದರು. ಆದರೆ ಬೆಳಗಿನ ಜಾವ 4ರ ವೇಳೆಯಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ 3 ಕಾಡಾನೆಗಳು ಜಮೀನಿಗೆ ನುಗ್ಗಿ ನೀರಾವರಿ ಪರಿಕರಗಳನ್ನು ನಾಶಪಡಿಸುತ್ತಿದ್ದವು. ಕನಕರಾಜು ಆನೆಗಳನ್ನು ಓಡಿಸಲು ಮುಂದಾದರು. ಆದರೆ ಆನೆಗಳ ಚಲನವಲನವನ್ನು ಗಮನಿಸಿದ ಇವರು ಭಯಭೀತರಾಗಿ ಗ್ರಾಮಕ್ಕೆ ಆಗಮಿಸಿದರು.

ಬಳಿಕ ಕುಟುಂಬಸ್ಥರು ಹಾಗೂ ಕೆಲ ರೈತರೊಂದಿಗೆ ಜಮೀನಿಗೆ ತೆರಳಿ ನೋಡಿದಾಗ ಆನೆಗಳು ಹಲವು ಕಡೆಗಳಲ್ಲಿ ನೀರಾವರಿ ಪರಿಕರಗಳನ್ನು ಧ್ವಂಸಗೊಳಿಸಿದ್ದವು. ಮುಸುಕಿನ ಜೋಳದ ಫಸಲನ್ನು ತಿಂದು ತಿಳಿದು ನಾಶಪಡಿಸಿವೆ. ರೈತ ಮಲಗಿದ್ದ ಮಂಚವನ್ನು ಸಹ ನಾಶಪಡಿಸಿವೆ. ಹಾಗೆಯೇ ಸಮೀಪದ ಕುಮಾರ್ ಅವರಿಗೆ ಸೇರಿದ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು ಅಲ್ಲೂ ಮುಸುಕಿನ ಜೋಳದ ಫಸಲನ್ನು ಸಹ ನಾಶಪಡಿಸಿವೆ. ಇದರಿಂದ ನಷ್ಟ ಉಂಟಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ರೈತರಾದ ಕನಕರಾಜು, ಕುಮಾರ್ ಒತ್ತಾಯಿಸಿದ್ದಾರೆ.

ಪರಿಹಾರಕ್ಕೆ ಒತ್ತಾಯ: ಈ ಭಾಗದ ಜಮೀನುಗಳಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಫಸಲು, ನೀರಾವರಿ ಪರಿಕರ ಹಾಗೂ ಸೋಲಾರ್ ಬೇಲಿಯನ್ನು ನಾಶಪಡಿಸುತ್ತಲೇ ಇವೆ. 2 ತಿಂಗಳ ಹಿಂದೆ ಗ್ರಾಮದ ತಿರುಮಮ್ಮ, ಚಂದ್ರಮ್ಮ, ಗೋಪಾಲ್, ಮುನಿಯಪ್ಪ ಹಾಗೂ ಇನ್ನಿತರ ರೈತರ ಜಮೀನಿಗೆ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿತ್ತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಜಮೀನಿಗೆ ಆಗಮಿಸಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಲಾಗುವುದು ಹಾಗೂ ಕಾಡಾನೆಗಳು ಜಮೀನಿಗೆ ಬಾರದಂತೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಈ ಕಾರ್ಯವಾಗಿಲ್ಲ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶೀಘ್ರ ಪರಿಹಾರ ನೀಡಬೇಕು. ಹಾಗೆಯೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ರೈತ ಶಿವರಾಜು ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕರಾಜು ಒತ್ತಾಯಿಸಿದ್ದಾರೆ.