ನ್ಯೂಸ್

ಕಾಂಪೌಂಡ್ ಕುಸಿದು ವ್ಯಕ್ತಿ ಸಾವು


ಹಾಸನ: ನಗರದ ಹರ್ಷಮಹಲ್ ರಸ್ತೆಯಲ್ಲಿ ಬಿಜಿಎಸ್ ಚಿತ್ರಮಂದಿರದ ಎದುರು ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯು ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮತ್ತಷ್ಟು ದುರ್ಬಗೊಂಡು ಗುರುವಾರ ರಾತ್ರಿ ಕುಸಿದು ಬಿದ್ದಿದ್ದು, ಗೋಡೆ ಪಕ್ಕದ ಮಲಗಿದ್ದ ವ್ಯಕ್ತಿಯೊಬ್ಬ ಗೋಡೆ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಮೃತ ವ್ಯಕ್ತಿಯನ್ನು ರಸ್ತೆ ಬದಿ ವ್ಯಾಪಾರಿ ಲೋಕೇಶ್ (50) ಎಂದು ಗುರುತಿಸಲಾಗಿದೆ. ಈತ ವಲ್ಲಬಾಯಿ ರಸ್ತೆಯ ನಿವಾಸಿ ಆಗಿದ್ದು ರಸ್ತೆ ಬದಿ ಮಾಸ್ಕ್, ಹೇರ್‌ಪಿನ್ ಇತ್ಯಾದಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದನು. ಈತ ಮನೆಗೆ ಹೋಗದೆ ನಿತ್ಯ ಬಿಜಿಎಸ್ ಚಿತ್ರಮಂದಿರ ಎದುರಿನ ಕಾಂಪೌಂಡ್ ಗೋಡೆ ಪಕ್ಕ ಒಂದು ಪ್ಲಾಸ್ಟಿಕ್ ಶೀಟ್ ಆಸರೆ ಮಾಡಿಕೊಂಡು ಮಲಗುತ್ತಿದ್ದ ಎನ್ನಲಾಗಿದೆ.


ರಾತ್ತಿ ಸುರಿದ ಜೋರುಮಳೆಗೆ ಸುಮಾರು 50 ಅಡಿ ಉದ್ದಕ್ಕೆ ಕಾಂಪೌಂಡ್ ಗೋಡೆಯು ಕುಸಿದು ಬಿದ್ದಿದೆ. ಬೆಳಗ್ಗೆ ಈ ರಸ್ತೆಯಲ್ಲಿ ತಿರುಗುವ ಜನ ಕುಸಿದ ಬಿದ್ದ ಕಾಂಪೌಂಡ್‌ನ ಅವಶೇಷದ ಅಡಿ ಪ್ಲಾಸ್ಟಿಕ್ ಹೊದಿಕೆ ಕಂಡು ಅನುಮಾನದಿಂದ ತೆರವು ಮಾಡಿ ನೋಡಿದಾಗ ಲೋಕೇಶನ ಮೃತದೇಹ ಪತ್ತೆ ಆಗಿದೆ.


ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.