ನ್ಯೂಸ್

ಕಾಂಗ್ರೇಸ್ ಭದ್ರಕೋಟೆಯಲ್ಲಿ ಮತ್ತೆ ಬಿರುಗಾಳಿ / ಲೋಕಸಭಾ ಚುನಾವಣೆಯ ಸಮೀಪದಲ್ಲಿ ಜಿಲ್ಲಾ ಕಾಂಗ್ರೇಸ್‌ನಲ್ಲಿ ಭುಗಿಲೆದ್ದ ಭಿನ್ನಮತ / ಭಿನ್ನಮತ ನಿವಾರಿಸಲು ಮುಂದಾಗದ ಹೈಕಮ್ಯಾಂಡ್

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಒಳ ಜಗಳದಿಂದ ಕಾಂಗ್ರೇಸ್ ಭದ್ರಕೋಟೆಯಾಗಿದ್ದ ಕೋಲಾರ ಲೋಕಸಭಾ ಸ್ಥಾನವನ್ನು ಬಿಜೆಪಿ ಪಾಲಾಗುವಂತೆ ಆಯಿತು. ಕಳೆದ ಬಾರಿಯ ತಪ್ಪು ಮತ್ತೆ ಮರುಕಳಿಸಬಾರದು ಎಂದು ಹೈಕಮ್ಯಾಂಡ್ ಜಿಲ್ಲಾ ಕಾಂಗ್ರೇಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದರೂ, ಮತ್ತೆ ಜಿಲ್ಲಾ ಕಾಂಗ್ರೇಸ್ ಭಿನ್ನಮತ ಮುಂದುವರೆದಿದೆ.

ಮಂಗಳವಾರ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರ ಕಛೇರಿಯಲ್ಲಿ ಕೋಲಾರ ಲೋಕಸಭಾ ಅಭ್ಯರ್ಥಿಯ ವಿಚಾರವಾಗಿ ಚರ್ಚಿಸಲು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರುಗಳ ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ೮ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಅಧ್ಯಕ್ಷರುಗಳನ್ನು ಮ್ತು ಜಿಲ್ಲಾ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಸಭೆಯನ್ನು ಕರೆಯಲಾಗಿತ್ತು.

ಕೋಲಾರ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ೮ ವಿಧಾನಸಭಾ ಕ್ಷೇತ್ರಗಳ ೧೬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳು ಸಭೆಗೆ ಆಗಮಿಸಬೇಕಾಗಿತ್ತು. ಆದರೆ ಎರಡೂ ಜಿಲ್ಲೆಯ ಅಧ್ಯಕ್ಷರುಗಳ ಮತ್ತು ಜಿಲ್ಲಾ ಪದಾಧಿಕಾರಿಗಳ ಜೊತೆಗೆ ೮ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಮಾತ್ರ ಸಭೆಯಲ್ಲಿ ಹಾಜರಿದ್ದರು.

ಒಂದು ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಇರುತ್ತಾರೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಭಾಗವಹಿಸಿಲ್ಲ. ಇದರ ಜೊತೆಗೆ ಚಿಂತಾಮಣಿ, ಶಿಡ್ಲಘಟ್ಟ, ಬಂಗಾರಪೇಟೆಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಸೇರಿದಂತೆ ೮ ಜನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಸಭೆಯಿಂದ ದೂರ ಉಳಿದಿದ್ದರು.

ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯ ಸಂಗ್ರಹಿಸುವ ಸಂದರ್ಭದಲ್ಲಿ ಕೆ.ಹೆಚ್.ಮುನಿಯಪ್ಪನವರನ್ನು ಮತ್ತೆ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕರೆತರಬೇಕೆಂದು ಇಬ್ಬರು ಜಿಲ್ಲಾಧ್ಯಕ್ಷರು ಕೆಲವು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಒತ್ತಾಯಪಡಿಸಿದ್ದಾರೆ. ಮುಳಬಾಗಿಲು ಕ್ಷೇತ್ರದಿಂದ ಇಬ್ಬರು ಅಧ್ಯಕ್ಷರುಗಳು ಮತ್ತು ಬಂಗಾರಪೇಟೆಯ ಬೂದಿಕೋಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಎಲ್ಲರ ಅಭಿಪ್ರಾಯ ಪಡೆದು ಗೆಲ್ಲುವ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಿ ಎಂದು ಪರೋಕ್ಷವಾಗೆ ಕೆ.ಹೆಚ್.ಮುನಿಯಪ್ಪನವರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೋಲಾರ ಕಾಂಗ್ರೇಸ್ ಭದ್ರಕೋಟೆ :
೧೯೫೭ ರಿಂದ ಇಲ್ಲಿಯವರೆವಿಗೂ ಕೋಲಾರ ಲೋಕಸಭಾ ಕ್ಷೇತ್ರ ೨ ಬಾರಿ ಕಾಂಗ್ರೇಸ್ ಹೊರತುಪಡಿಸಿ ಉಳಿದಂತೆ ಕಾಂಗ್ರೇಸ್ ಪಕ್ಷದಿಂದಲೇ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಸತತವಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಜಿ.ವೈ.ಕೃಷ್ಣನ್ ಮತ್ತು ಕೆ.ಹೆಚ್.ಮುನಿಯಪ್ಪ ಹಚ್ಚುಬಾರಿ ಗೆಲುವನ್ನು ಸಾಧಿಸಿದವರಾಗಿದ್ದಾರೆ.

ಜಿ.ವೈ.ಕೃಷ್ಣನ್ ೩ ಬಾರಿ ಕಾಂಗ್ರೇಸ್ ನಿಂದ ಗೆಲುವು ಸಾಧಿಸಿ ೪ನೇ ಬಾರಿ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದ ೧೯೮೪ರಲ್ಲಿ ಜನತಾ ಪಕ್ಷದಿಂದ ವಿ.ವೆಂಕಟೇಶ್ ಆಯ್ಕೆ ಆದರು.

೭ ಬಾರಿ ಸತತರವಾಗಿ ಕಾಂಗ್ರೇಸ್ ಪಕ್ಷದಿಂದ ಆಯ್ಕೆ ಆಗಿದ್ದ ಕೆ.ಹೆಚ್.ಮುನಿಯಪ್ಪ ೨೦೧೯ರಲ್ಲಿ ಕಾಂಗ್ರೇಸ್ ಪಕ್ಷದ ಒಳಜಗಳದಿಂದ ಬಿಜೆಪಿಯ ಮುನಿಸ್ವಾಮಿ ಸಂಸದರಾಗಿ ಆಯ್ಕೆ ಆದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲೆ ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಮತವನ್ನು ಸರಿಪಡಿಸಲು ಹೈಕಮ್ಯಾಂಡ್ ಮಟ್ಟದಲ್ಲಿ ೩ ಮತ್ತು ೪ ಸಭೆಗಳನ್ನು ನಡೆದು ಕಡೆ ಗಳಿಗೆಯಲ್ಲಿ ಕೆ.ಹೆಚ್.ಮುನಿಯಪ್ಪ ನವರ ಗುಂಪು ಮತ್ತು ಘಟಬಂಧನ್ ನ ರಮೇಶ್ ಕುಮಾರ್ ರವರ ಗುಂಪು ಕೊನೆಗೂ ಒಂದಾಗಲಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ೨ ಸ್ಥಾನಗಳನ್ನು ಕಾಂಗ್ರೇಸ್ ಪಕ್ಷ ಕಳೆದುಕೊಳ್ಳುವಂತಾಯಿತು. ಮೇಲ್ನೋಟಕ್ಕೆ ಒಂದಾಗಿದ್ದೇವೆ ಎಂದು ತೋರಿಸಿಕೊಂಡರೂ ಸಹ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಯಿಗೆ ಮುಯಿ ಎನ್ನುವಂತೆ ಕೆ.ಹೆಚ್.ಮುನಿಯಪ್ಪನವರನ್ನು ಸೋಲಿಸಿದರವರ ಪರವಾಗಿ ಕೆ.ಹೆಚ್.ಮುನಿಯಪ್ಪ ನವರ ಗುಂಪು ಕೆಲಸ ಮಾಡಲಿಲ್ಲ ಎಂಬುವುದು ಹೈಕಮ್ಯಾಂಡ್‌ಗೂ ಗೊತ್ತಿರುವ ವಿಷಯ.

ರಾಷ್ಟç ಮಟ್ಟದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ರಾಹುಲ್ ಗಾಂಧಿ ಜೋಡೋಯಾತ್ರೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕಾಂಗ್ರೇಸ್ ಭದ್ರಕೋಟೆಯಾಗಿರುವ ಕೋಲಾರ ಜಿಲ್ಲೆಯಲ್ಲಿರುವ ಭಿನ್ನಮತವನ್ನು ಸರಿಪಡಿಸಲು ಇವರಿಂದ ಸಾಧ್ಯವಾಗಲಿಲ್ಲ.

ಕೆ.ಹೆಚ್.ಮುನಿಯಪ್ಪನವರ ಗುಂಪು ಕೆ.ಹೆಚ್.ಮುನಿಯಪ್ಪನವರನ್ನು ಮತ್ತೆ ಲೋಕಸಭೆ ಸದಸ್ಯರಾಗಿ ಮಾಡಬೇಕೆಂದು ಒತ್ತಾಯಪಡಿಸುತ್ತಿದ್ದಾರೆ. ಘಟಬಂಧನ್ ಟೀಮ್ ಕೆ.ಹೆಚ್.ಮುನಿಯಪ್ಪ ಸ್ಪರ್ಧೆ ಮಾಡಿದರೆ ಮತ್ತೆ ಗೆಲುವು ಅಸಾಧ್ಯ ಆದ್ದರಿಂದ ಈ ಬಾರಿ ಬಲಗೈ ಜನಾಂಗವರಿಗೆ ಟಿಕೆಟ್ ನೀಡಬೇಕೆಂದು ಘಟಬಂಧನ್ ಒತ್ತಾಯಪಡಿಸುತ್ತಿದ್ದು, ಘಟಬಂಧನ್ ಅಭ್ಯರ್ಥಿಯಾಗಿ ಈ ಸಿದ್ಯಕ್ಕೆ ಸಿ.ಎಂ.ಮುನಿಯಪ್ಪ ಸೇರಿದಂತೆ ೩ ಮತ್ತು ೪ ಜನ ಅಭ್ಯರ್ಥಿಗಳ ಹೆಸರುಗಳನ್ನು ಹೈಕಮಾಂಡ್ ಬಳಿ ಚರ್ಚಿಸುತ್ತಿದ್ದಾರೆ.

ಕೆ.ಹೆಚ್.ಮುನಿಯಪ್ಪನವರು ಲೋಕಸಭಾ ಕ್ಷೇತ್ರದ ಮೇಲೆ ಇಷ್ಟ ಇಲ್ಲದಿದ್ದರು ಅವರ ಅಭಿಮಾನಿಗಳು ವಿನಾಕಾರಣ ಅವರ ಹೆಸರನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದರ ಹಿಂದೆ ಅವರ ಮಗನನ್ನು ರಾಜಕೀಯಕ್ಕೆ ಕರೆತರುವ ಉದ್ದೇಶ ಕೆ.ಹೆಚ್.ಮುನಿಯಪ್ಪನವರ ಇರಾದೆಯೂ ಆಗಿದೆ ಎನ್ನಲಾಗಿದೆ.

ಕೆ.ಹೆಚ್.ಮುನಿಯಪ್ಪನವರ ಅಳಿಯ ಚಿಕ್ಕಪೆದ್ದನ್ನ ಈಗಾಗಲೇ ಜಿಲ್ಲೆಯ ಎಲ್ಲಾ ರಾಜಕಾರಣಿಗಳನ್ನು ಭೇಟಿಯಾಗಿ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ಘಟಬಂಧನ್ ಗುಂಪಿನ ರಾಜಕಾರಣಿಗಳನ್ನು ಭೇಟಿಯಾಗಿ ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ಕೆ.ಹೆಚ್.ಮುನಿಯಪ್ಪನವರಿಗೆ ಇರುಸು ಮುರುಸು ಉಂಟಾಗಿದೆ.

ಕೆ.ಹೆಚ್.ಮುನಿಯಪ್ಪನವರ ಬಗ್ಗೆ ಅಭ್ಯರ್ಥಿಯನ್ನಾಗಿ ಮಾಡಲು ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂ.ಎಲ್.ಸಿ.ಅನಿಲ್ ಕುಮಾರ್, ಸಚಿವ ಡಾ.ಎಂ.ಸಿ.ಸುಧಾಕರ್, ಇವರಿಗೆ ಇಷ್ಟ ಇಲ್ಲದೆ ಮೇಲ್ನೋಟಕ್ಕೆ ಹೈಕಮಾಂಡ್ ಎನ್ನುತ್ತಿದ್ದಾರೆ. ಇನ್ನು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ, ಕೆ.ಹೆಚ್.ಮುನಿಯಪ್ಪನವರ ಒಡನಾಟವಿದ್ದರೂ ಪ್ರತ್ಯಕ್ಷವಾಗಿ ಬೆಂಬಲ ಸೂಚಿಸದೆ ಹೈಕಮಾಂಡ್ ತೀರ್ಮಾನ ಅಂತಿಮ ಎನ್ನುತ್ತಿದ್ದು, ಕೆ.ಹೆಚ್.ಗೆ ಟಿಕೇಟ್ ನೀಡಿದರೆ ಗೆಲುವು ಕಷ್ಟ ಎನ್ನುವ ಮಾತನ್ನು ಹೊರ ಹಾಕುತ್ತಿದ್ದಾರೆ.

ನಾನು ಅಭ್ಯರ್ಥಿಯಲ್ಲ :
ಕೋಲಾರದಿಂದ ಬಲಗೈ ಸಮುದಾಯಕ್ಕೆ ಸೇರಿದ ಗೃಹಸಚಿವ ಪರಮೇಶ್ವರ್ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ಹರಡಿತ್ತು. ಬುಧವಾರ ಕೋಲಾರ ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಬೆಂಗಳೂರು ಕೋಲಾರ ಹೆದ್ದಾರಿಯ ರಾಮಸಂದ್ರದ ಗೇಟ್ ಬಳಿ ಸಚಿವರನ್ನು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಮಾಲೂರು ಶಾಸಕ ನಂಜೇಗೌಡ ಹಾಗೂ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಇತರರು ಸ್ವಾಗತಿಸಿ ಸಚಿವರ ಕಾರಿನಲ್ಲಿ ಈ ಮೂವ್ವರು ಬಂಗಾರಪೇಟೆ ಆಗಮಿಸಿದ ವೇಳೆ ಕೋಲಾರದಿಂದ ಸ್ಪರ್ಧೆ ಮಾಡುವಂತೆ ತಿಳಿಸಿದಾಗ ಅದಕ್ಕೆ ಅವರು ನಿರಾಕರಿಸಿದ್ದಾರೆ.

ದಲಿತ ಮುಖಂಡ ಸಿ.ಎಂ.ಮುನಿಯಪ್ಪನವರಿಗೆ ಅವಕಾಶ ಮಾಡಿಕೊಡಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಬೇಡಿಕೆ ಇಟ್ಟಾಗ ಹಣ ಎಲ್ಲಿ ತರುತ್ತೀರಿ ಎಂದಾಗ ನೀವೇ ಇದ್ದೀರಲ್ಲಾ ಎಂದು ಹಾಸ್ಯ ಚಟಾಕಿ ಹಾರಿಸಿದ ಕೊತ್ತೂರು ಶಾಸಕರುಗಳು ಹಾಕಿಕೊಳ್ಳುತ್ತೇವೆ. ನೀವು ಕೊಡಿಸಿ ಎಂದು ಒತ್ತಡ ಹಾಕಿದ್ದಾರೆ. ಅದು ಚರ್ಚೆಯಲ್ಲಿ ನಡೆಯುತ್ತಿದೆ ಎಂಬ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಬಾಕ್ಸ್
ಮಂಗಳವಾರ ಸಚಿವ ರಾಮಲಿಂಗಾರೆಡ್ಡಿ ಕಛೇರಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹ ಸಭೆಗೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಿಗೆ ಜಿಲ್ಲಾಧ್ಯಕ್ಷರು ಸರಿಯಾಗಿ ಮಾಹಿತಿ ನೀಡಿಲ್ಲ, ಕೆ.ಹೆಚ್.ಮುನಿಯಪ್ಪನವರಿಗೆ ಮಾತ್ರ ಜಿಲ್ಲಾಧ್ಯಕ್ಷರಾಗಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಎಲ್ಲೂ ಗುರ್ತಿಸಿಕೊಳ್ಳದ ಖಜಾಂಚಿ ರಾಮ್‌ಪ್ರಸಾದ್ ಅವರೂ ಸಹ ಕೆ.ಹೆಚ್.ಮುನಿಯಪ್ಪನವರಿಗೆ ಖಜಾಂಚಿಯಾಗಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳು ಜಿಲ್ಲಾಧ್ಯಕ್ಷರ ವಿರುದ್ಧ ನೇರ ಆರೋಪ ಮಾಡಿ, ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದಕ್ಕೆ ಇದೇ ಉದಾಹರಣೆಯಾಗಿದೆ.

ಬಾಕ್ಸ್
ಕೋಲಾರ ಜಿಲ್ಲೆಯ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ರವರನ್ನು ಒಂದು ಮಾಡದೇ ಹೋದರೆ ಜಿಲ್ಲೆಯಲ್ಲಿ ಕಾಂಗ್ರೇಸ್‌ಗೆ ಉಳಿಗಾಲವಿಲ್ಲದಂತಾಗಿದೆ. ಇಬ್ಬರೂ ಒಂದೊAದು ಬಾರಿ ಸೋತಿದ್ದರೂ ಸಹ ತಮ್ಮ ಪ್ರತಿಷ್ಠೆಗಳನ್ನು ಬಿಡುತ್ತಿಲ್ಲ. ಈ ಇಬ್ಬರ ಅಭಿಪ್ರಾಯವಿಲ್ಲದೇ ಲೋಕಸಭೆಗೆ ಅಭ್ಯರ್ಥಿ ಆಯ್ಕೆ ಮಾಡಿದರೆ ಕಾಂಗ್ರೇಸ್ ಅಭ್ಯರ್ಥಿ ಸೋಲು ಗ್ಯಾರಂಟಿ ಎಂದು ಎರಡೂ ಕಡೆ ಗುರ್ತಿಸಿಕೊಳ್ಳದೇ ಇರುವ ಕಾಂಗ್ರೇಸ್ ಮುಖಂಡರ ಅಭಿಪ್ರಾಯವಾಗಿದೆ.

ಚಿತ್ರ ೦೩ ಕೆ.ಎಲ್.ಆರ್. ೦೩ : ಕೆ.ಹೆಚ್.ಮುನಿಯಪ್ಪ ರವರ ಭಾವಚಿತ್ರ
ಚಿತ್ರ ೦೩ ಕೆ.ಎಲ್.ಆರ್. ೦೩ಎ : ಕೆ.ಆರ್. ರಮೇಶ್ ಕುಮಾರ್ ರವರ ಭಾವಚಿತ್ರ
ಚಿತ್ರ ೦೩ ಕೆ.ಎಲ್.ಆರ್. ೦೩ಬಿ : ದಲಿತ ಮುಖಂಡ ಸಿ.ಎಂ.ಮುನಿಯಪ್ಪ ರವರ ಭಾವಚಿತ್ರ