ಮಂಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿದೆ. ಕರ್ನಾಟಕದಲ್ಲಿ ತಾಲಿಬಾನ್ ಮಾದರಿ ಆಡಳಿತ ನಡೆಯುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಕರ್ನಾಟಕದಲ್ಲಿ ಮುಸ್ಲಿಂ ಪರ ಸರ್ಕಾರ ಇದೆ ಎಂದು ಈ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಘೋಷಿಸಿದ್ದಾರೆ. ಇದರ ಪರಿಣಾಮ ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದರು.
ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರದ ವಿಜಯೋತ್ಸವ ಸಂದರ್ಭ ಬೋಳಿಯಾರ್‌ನಲ್ಲಿ ಬಿಜೆಪಿಯ ಮೂವರು
ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ. ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಸ್ಥಳೀಯ ಮಸೀದಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಇದು ಸ್ಪಷ್ಟವಾಗಿದೆ. ಇದರ ಹೊರತು ಬೇರೆ ಯಾವುದೇ ಘೋಷಣೆ ಕೂಗಿಲ್ಲ. ಭಾರತ್ ಮಾತಾ ಕೀ ಜೈ ಘೋಷಣೆ ಹಾಕುವುದು ತಪ್ಪಾ? ಎಂದು ಅವರು ಪ್ರಶ್ನಿಸಿದರು.
* ಪೊಲೀಸ್ ಕಮಿಷನರ್ ಪುರಾವೆ ನೀಡಲಿ
ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರು ‘ಪಾಕಿಸ್ತಾನ ಕುನ್ನಿಗಳು ಎನ್ನುವ ಘೋಷಣೆ ಹಾಕಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಹೇಳಿಕೆ ನೀಡಿದ್ದಾರೆ. ಆ ರೀತಿ ಘೋಷಣೆ ಕೂಗಿದ ಸಿಸಿ ಕ್ಯಾಮರಾ ತುಣುಕು ಬಿಡುಗಡೆಗೊಳಿಸುವಂತೆ ಅವರಿಗೆ ಸೂಚಿಸಿದ್ದೇನೆ. ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದವರ ಮೇಲೆ ಘಟನೆ ನಡೆದ ಮರುದಿನ ದೂರು ನೀಡಲಾಗಿದೆ. ಅಷ್ಟು ಸಮಯ ದೂರು ನೀಡಿದವರು ಮಣ್ಣು ತಿನ್ನುತ್ತಾ ಇದ್ರಾ ? ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಸಡಿಲಗೊಳಿಸಲು ಈ ರೀತಿ ಪ್ರತಿ ದೂರು ಪಡೆಯಲಾಗಿದೆ. ಈ ದೂರನ್ನು ತಕ್ಷಣ ವಾಪಸ್ ಪಡೆಯಬೇಕೆಂದು ಆರ್.ಅಶೋಕ್ ಆಗ್ರಹಿಸಿದರು.
* ಮಾನವೀಯತೆ ಇಲ್ಲದ ಸ್ಪೀಕರ್
ಬೆಂಗಳೂರಿನ ಯಲಹಂಕದಲ್ಲಿ , ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗುತ್ತಾರೆ.ಅಂತಹವರ ವಿರುದ್ಧ ಕೇಸು ದಾಖಲಾಗುವುದಿಲ್ಲ. ಈಗ ಸ್ಪೀಕರ್ ಖಾದರ್ ಕ್ಷೇತ್ರದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಆರೋಗ್ಯ ಸಚಿವರು ಹಾಗೂ ಸ್ಪೀಕರ್ ಕನಿಷ್ಠ ಮಾನವೀಯತೆ ದೃಷ್ಟಿಯಿಂದಲೂ ಅವರನ್ನು
ಭೇಟಿಯಾಗಿಲ್ಲ. ಈಗ ಅಮಾಯಕ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ. ದ.ಕ.ದಲ್ಲಿ ಐವರು ಶಾಸಕರ ಮೇಲೂ ಸರ್ಕಾರ ಕೇಸು ದಾಖಲಿಸಿದೆ. ಈ ತಾಲಿಬಾನ್ ರಾಜ್ಯ ಸರ್ಕಾರವನ್ನು ಬಗ್ಗು ಬಡಿಯುತ್ತೇವೆ. ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸಲಿದೆ. ಜೂ.13ರಂದು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ವಿಚಾರದಲ್ಲಿ ಹೋರಾಟ ನಡೆಸಲಾಗುವುದು. ಬೋಳಿಯಾರ್ ಘಟನೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಪೂರ್ತಿ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು. ಅಮಾಯಕ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಿಸಿದ ಕೇಸು ತಕ್ಷಣ ಹಿಂಪಡೆಯಬೇಕೆಂದು ಅವರು ಅಗ್ರಹಿಸಿದರು.
* ಗೃಹ ಸಚಿವರನ್ನು ಹುಡುಕುವ ಸ್ಥಿತಿ
ಕರ್ನಾಟಕದಲ್ಲಿ ಯಾರು ಗೃಹ ಸಚಿವರು ಎಂದು ಹುಡುಕುವ ಪರಿಸ್ಥಿತಿ ತಲೆದೋರಿದೆ.ಜಿಲ್ಲೆಗೊಬ್ಬರು ಗೇಹ ಸಚಿವರಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೂಂಡಾಗಳಿಗೆ ಹಬ್ಬವಾದಂತಾಗಿದೆ. ಈ ಸರ್ಕಾರ ಗೂಂಡಾಗಳ ಕೈಯಲ್ಲಿದೆ. ಇಲ್ಲಿ ಸರ್ಕಾರವೇ ಇಲ್ಲ. ದೇರಳಕಟ್ಟೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮಾತನಾಡಿಸಿದ್ದೇನೆ. ಗಾಯಾಳುಗಳಿಗೆ ಪಕ್ಷದಿಂದ ನೆರವು ನೀಡುತ್ತೇವೆ. ಯಾವುದೇ
ಸಂದರ್ಭದಲ್ಲೂ ಪಕ್ಷ ಕಾರ್ಯಕರ್ತರ ಪರವಾಗಿ ನಿಲ್ಲುತ್ತದೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭೀತಿ ಪಡಬೇಕಾಗಿಲ್ಲ ಎಂದು ಅವರು ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್
ನಾಕ್, ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ, ಯತೀಶ್ ಆರ‌್ವಾರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮುಖಂಡರಾದ ನಿತಿನ್ ಕುಮಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ತಿಲಕ್‌ರಾಜ್ ಕೃಷ್ಣಾಪುರ , ಪೂಜಾ ಪೈ, ಸಂಜಯ ಪ್ರಭು ಉಪಸ್ಥಿತರಿದ್ದರು.