ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರ ಕಿವಿ ಮೇಲೆ ಮತದಾರರೇ ಹೂವು ಇಡಲಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ಟೀಕಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಜೆಟ್ ಟೀಕಿಸಲು ‘ಕಿವಿ ಮೇಲೆ ಹೂವು’ ಪೋಸ್ಟರ್ ಅಭಿಯಾನವನ್ನು ಕಾಂಗ್ರೆಸ್‌ನವರು ಕೈಗೊಂಡಿದ್ದಾರೆ. ಇದು ಕೀಳು ರಾಜಕೀಯ. ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಸೋಲಿಸುವ ಮೂಲಕ ಕಿವಿ ಮೇಲೆ ಹೂವು ಇಡುವುದು ಗೊತ್ತಾಗಿದೆ. ಅದಕ್ಕಾಗಿಯೇ ಸ್ವಯಂ ಪ್ರೇರಣೆಯಿಂದ ಅವರೇ ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಬಜೆಟ್ ಕುರಿತು ಸದನದಲ್ಲಿ ಚರ್ಚಿಸಲು ಕಾಂಗ್ರೆಸ್‌ಗೆ ಶಕ್ತಿ ಇಲ್ಲ. ಹೀಗಾಗಿ, ಬೀದಿಯಲ್ಲಿ ಬಂದು ಬಡಾಯಿಸುತ್ತಿದೆ. ಕಾಂಗ್ರೆಸ್ ನಾಯಕರು ಡೋಂಗಿತನ ಬಿಡಬೇಕು. ಎಲ್ಲ ಕಡೆ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕರ್ನಾಟಕದಲ್ಲಿ ಮಾತ್ರ ಕೊಂಚ ಉಸಿರಾಡುತ್ತಿದೆ. ಚುನಾವಣೆ ಬಳಿಕ ಆ ಉಸಿರೂ ನಿಂತುಹೋಗಲಿದೆ ಎಂದು ಕಿಡಿಕಾರಿದರು.
ಪ್ರತಿಪಕ್ಷವಾಗಿ ಜನರ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಡಬೇಕು. ಅದನ್ನು ಬಿಟ್ಟು ಪೊಳ್ಳು ವಿಷಯ ಇಟ್ಟುಕೊಂಡು ಹೋರಾಟ ಮಾಡುವುದನ್ನು ಕೈಬಿಡಬೇಕು. ಕಿವಿ ಮೇಲೆ ಹೂವು ಪೋಸ್ಟರ್ ಅಭಿಯಾನದಿಂದ ಬಡವರ ಹೊಟ್ಟೆ ತುಂಬಲ್ಲ. ಜನರಿಗೂ ಪ್ರಯೋಜನವಾಗಲ್ಲ ಎಂದು ಹರಿಹಾಯ್ದರು.
ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ಬರುವುದರಿಂದ ಇದು ನಾಮ್ ಕಾ ವಾಸ್ತೆ ಬಜೆಟ್ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ಈಗ ಬಜೆಟ್ ಮಂಡಿಸಲಾಗಿದೆ. ಮುಂದಿನ ಅವಧಿಗೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಕೊಟ್ಟಿರುವ ಭರವಸೆಗಳನ್ನು ಈಡೇರಿಸಲಾಗುವುದು. ಇಲ್ಲವಾದರೆ ಆಗ ಕೇಳಿ. ಈಗ ಏಕೆ ಬಾಯಿ ಬಡಿದುಕೊಳ್ಳುತ್ತಿರುವುದು ಎಂದು ಕಿಡಿಕಾರಿದರು.