ನ್ಯೂಸ್

ಕಾಂಗ್ರೆಸ್ ಸರ್ಕಾರದಿಂದ ಭಾರತೀಯ ಸಂಸ್ಕೃತಿಯ ಮೇಲೆ ದೌರ್ಜನ್ಯ / ಸಿಇಟಿಗೆ ಜನಿವಾರ ತೆಗೆಸುವ ಯತ್ನ ಖಂಡನೀಯ / ಓಂಶಕ್ತಿ ಚಲಪತಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಯಜ್ಞೋಪವೀತ ಅಥವಾ ಜನಿವಾರ ತೆಗೆಸುವ ಯತ್ನ ಹಿಂದೂ ಹಾಗೂ ಭಾರತೀಯ ಸಂಸ್ಕೃತಿಯ ಮೇಲೆ ನಡೆದಿರುವ ದೌರ್ಜನ್ಯವಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಖಂಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿ, ಸಿಇಟಿ ಪರೀಕ್ಷೆಗೆ ಜನಿವಾರ ತೆಗೆಸುವ ಪ್ರಯತ್ನ ಕೇವಲ ನೆಪವಾಗಿದ್ದು, ಇದರ ಹಿಂದೆ ನಮ್ಮ ಧಾರ್ಮಿಕ ಭಾವನೆಗಳಿಗೆ ಕುತ್ತು ತರುವ ಭಾರಿ ಷಡ್ಯಂತ್ರ ಇದ್ದಂತಿದೆ ಎಂದು ಆರೋಪಿಸಿದ್ದಾರೆ.

ನಮ್ಮ ಭಾರತದ ಸಂವಿಧಾನವೇ ಅವರವರ ಧರ್ಮದ ಆಚರಣೆಗೆ ಅವಕಾಶ ಕಲ್ಪಿಸಿದೆ. ಆದರೆ ಅಂತಹ ಸಂವಿಧಾನದ ತತ್ವಗಳಿಗೆ ಧಕ್ಕೆ ತರುವ ಪ್ರಯತ್ನ ಈ ಸರ್ಕಾರದಿಂದ ನಡೆದಿದೆ. ಹಿಂದೂಗಳ ತಾಳ್ಮೆ, ಸಹನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಪರೀಕ್ಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಎಷ್ಟು ಮಹತ್ವದ್ದು ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಇಂತಹ ಸಂದರ್ಭ ಬಳಸಿಕೊಂಡು ಜನಿವಾರ ತೆಗೆಸುವ ನೀಚ ಕೃತ್ಯಕ್ಕೆ ಕೈಹಾಕಲಾಗಿದೆ. ಇಂತಹ ದಬ್ಬಾಳಿಕೆ ಕೊನೆಗೊಳ್ಳಬೇಕು. ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕುಂಠಿತಗೊಳ್ಳದAತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ತುಷ್ಟೀಕರಣ ನೀತಿಯಿಂದಾಗಿ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಘಾಸಿಯುಂಟು ಮಾಡುವ ಕೆಲಸ ಮಾಡುತ್ತಿದೆ. ಇವರಿಗೆ ಸಂವಿಧಾನದ ಆಶಯಗಳ ರಕ್ಷಣೆಗಿಂತ ಒಂದು ಕೋಮಿನ ತುಷ್ಟೀಕರಣವೇ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.

ಹಿಂದೂ ಧರ್ಮದ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳಿಗೆ ಧಕ್ಕೆ ತರುವ ಯತ್ನ ಮುಂದುವರೆದರೆ ಅದರ ವಿರುದ್ದ ಬಿಜೆಪಿ ಉಗ್ರ ಹೋರಾಟ ನಡೆಸುತ್ತದೆ ಎಂದು ಈ ಮೂಲಕ ಅವರು ಎಚ್ಚರಿಕೆ ನೀಡಿದ್ದಾರೆ.

ಚಿತ್ರ ೨೨ ಕೆ.ಎಲ್.ಆರ್. ೦೩ : ಕೋಲಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿಚಲಪತಿ ರವರ ಭಾವಚಿತ್ರ