ಹುಬ್ಬಳ್ಳಿ: ಈ ಹಿಂದೆ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದಾಗ ಕರ್ನಾಟಕ ಮರುಜೀವ ನೀಡಿತ್ತು. ಇದೀಗ ಅದೇ ಪರಿಸ್ಥಿತಿ ಎದುರಾಗಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೂಲಕ ದೇಶದಾದ್ಯಂತ ಕಾಂಗ್ರೆಸ್ ಮರುಜೀವ ಪಡೆಯಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾದ ಕಾರ್ಯಕರ್ತರಿಗೆ ಕರೆ ನೀಡಿದರು.
ಇಲ್ಲಿನ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಹುಲ್ ಗಾಂಧೀ ಆಗಮನ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಈ ಹಿಂದೆ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಸ್ಪರ್ಧಿಸಿ ವಿಜೇತರಾಗಿದ್ದರು. ಈ ಬಾರಿಯೂ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ. ಇದಕ್ಕೆ ಪೂರಕವಾಗಿ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಆಗಸ್ಟ್ 2ರಂದು ನಗರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಬೇಕು. ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಜನ್ಮದಿನ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬೇಕು.
ಬೆಂಗಳೂರಿನಲ್ಲಿ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳಬೇಕು. ಈ ಮೂರೂ ಕಾರ್ಯಕ್ರಮ ಗಳನ್ನು ಶಾಸಕರು, ಮಾಜಿ ಶಾಸಕರು, ಹಿರಿಯ ನಾಯಕರು, ಬೂತ್ ಮಟ್ಟದ ಪದಾಧಿಕಾರಿಗಳು ನೇತೃತ್ವ ವಹಿಸಿ ಕಾರ್ಯಕ್ರಮ ಯಶಸ್ಚಿಗೊಳಿಸುವ ಜವಾಬ್ದಾರಿ ನಿಮ್ಮದು ಎಂದು ಹೇಳಿದರು.