| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಆಂತರಿಕ ಕಲಹದಿಂದ ಸರ್ಕಾರವನ್ನೂ ಕಳೆದುಕೊಂಡಿ ದ್ದಲ್ಲದೆ, ಪಕ್ಷಕ್ಕೂ ಅಪಾರ ಹಾನಿಯಾದುದ್ದನ್ನು ಅರಿತ ಹೈಕಮಾಂಡ್ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣೆ ಎದುರಿಗಿರುವಾಗ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಗ್ರಹಿಸಿರುವ ಹೈಕಮಾಂಡ್, ಇಡೀ ಸಂಘಟನೆಯ ಮೇಲೆ, ಅಷ್ಟೂ ಕ್ಷೇತ್ರದ ಪೂರ್ಣ ಹಿಡಿತ ತೆಗೆದುಕೊಳ್ಳಲು ಬಯಸಿದೆ.
ಇದೇ ಕಾರಣಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಚುನಾವಣೆವರೆಗೂ ಪ್ರತಿ ತಿಂಗಳಲ್ಲಿ 15 ದಿನವನ್ನು ಕರ್ನಾಟಕಕ್ಕೆ ಮೀಸಲಿಡಲಿದ್ದಾರೆ. ಹಾಗೆಯೇ ಪಕ್ಷದ ಬೆಳವಣಿಗೆಯನ್ನು ಪಡೆದುಕೊಳ್ಳಲು ಪ್ರತ್ಯೇಕ ನೆಟ್ವರ್ಕ್ ರೂಪಿಸಿಕೊಂಡಿದ್ದಾರೆ. ಇನ್ನೊಂದು ಭಾಗವಾಗಿ 224 ವಿಧಾನಸಭಾ ಕ್ಷೇತ್ರದ ಸ್ಥಿತಿಗತಿ ಅರಿತು, ಅಲ್ಲಿ ಆಗಬೇಕಾದ ಸುಧಾರಣೆ ಕ್ರಮಗಳನ್ನು ಪರಿಶೀಲಿಸುವುದು ಮತ್ತು ನಿರಂತರವಾಗಿ ಗಮನಿಸಲು ಬಯಸಿರುವ ಹೈಕಮಾಂಡ್, ಈ ಜವಾಬ್ದಾರಿಯನ್ನೂ ಸಹ ಸುರ್ಜೆವಾಲ ಹೆಗಲಿಗೆ ಹಾಕಿದೆ.
ರಾಜ್ಯ ಘಟಕದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣ ಸೇರಿ ಕ್ಷೇತ್ರವಾರು ಸ್ಥಳೀಯ ನಾಯಕರ ಬಣಗಳೂ ಇವೆ. ಪರಿಸ್ಥಿತಿ ಈ ರೀತಿ ಇದ್ದಾಗ ಚುನಾವಣೆಯಲ್ಲಿ ಒಳ ಹೊಡೆತ ಬೀಳಬಹುದು. ಜಾತಿ ಸಮೀಕರಣ ತಲೆ ಕೆಳಗಾಗಬಹುದು. ಹೀಗಾಗಿ ಪ್ರತಿ ಕ್ಷೇತ್ರದಲ್ಲೂ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಲೆಕ್ಕಾಚಾರದಲ್ಲೇ ಸುರ್ಜೆವಾಲ ಅಖಾಡಕ್ಕಿಳಿದಿದ್ದಾರೆ. ಕ್ಷೇತ್ರದ ಪರಿಚಯ, ಜಾತಿವಾರು ಮತದಾರರು, ಯಾವ ಸಮುದಾಯ ಯಾವ ಪಕ್ಷದ ಜತೆ ಇದೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳಿವೆ, ಬಿಜೆಪಿ ಅಥವಾ ಜೆಡಿಎಸ್ ಸೋಲಿಸಲು ಇರುವ ಅವಕಾಶಗಳ ಪ್ರಮಾಣ, ಸಂಭಾವ್ಯ ಅಭ್ಯರ್ಥಿಗಳು, ಅವರ ವೈಯಕ್ತಿಕ ಸಾಮರ್ಥ್ಯ, ಈ ಹಿಂದಿನ ಚುನಾವಣೆಗಳಲ್ಲಿ ಮತ ವಿಭಜನೆ ಹೀಗೆ ಎಲ್ಲ ಆಯಾಮಗಳಲ್ಲೂ ಅವಲೋಕನ ನಡೆಸಲಾಗುತ್ತದೆ. ಈ ಕಾರ್ಯ ಈ ತಿಂಗಳೊಳಗೆ 3-4 ಹಂತದಲ್ಲಿ ನಡೆಯುವುದು. ಕೆಲ ಕ್ಷೇತ್ರಗಳಲ್ಲಿ ಪೈಪೋಟಿ ಏರ್ಪಡಬಹುದು, ಜತೆಗೆ ಜೆಡಿಎಸ್ ಮತ್ತು ಬಿಜೆಪಿಯಿಂದ ಗೆಲ್ಲುವ ಕುದುರೆಗಳನ್ನು ಕರೆ ತರುವುದರಿಂದ ಒಂದಷ್ಟು ಸಮಸ್ಯೆ ಉಂಟಾಗಬಹುದು, ಇಂತಹ ಬಿಕ್ಕಟ್ಟನ್ನು ದೆಹಲಿಯಿಂದಲೇ ನಿರ್ವಹಿಸಲು ಬಯಸಲಾಗಿದೆ.
ಪಟ್ಟಿ ಇಷ್ಟಕ್ಕೆ ಮುಗಿದಿಲ್ಲ. ಎಲ್ಲ ವರ್ಗದವರಿಗೂ ಸ್ಥಾನ ಕೊಡಲು ನಿರ್ಧರಿಸಲಾಗಿದೆ. ತಡವಾಗಿದೆ ಎಂದು ಕೆಲವು ಹೆಸರುಗಳಿಗೆ ಅನುಮತಿ ನೀಡಿದ್ದಾರೆ. ಹಗಲು-ರಾತ್ರಿ ದುಡಿಯುವ ಎಲ್ಲರಿಗೂ ಅವಕಾಶ ಮಾಡಿಕೊಡುತ್ತೇವೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಕೆಪಿಸಿಸಿಗೆ ಬಹುಕಾಲದ ನಂತರ 150 ಪದಾಧಿಕಾರಿಗಳನ್ನು ಪ್ರಕಟಿಸಿದ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಕ್ಷದಲ್ಲಿ ತೊಡಗಿಕೊಂಡು, ನಿರಂತರವಾಗಿ ತೆರೆಮರೆಯಲ್ಲಿ ಪಕ್ಷದ ಕೆಲಸ ಮಾಡಿಕೊಂಡಿದ್ದವರಿಗೆ ಅವಕಾಶ ನೀಡದೆ ಇರುವುದರಿಂದ ಪ್ರತಿರೋಧ ದಿನದಿನಕ್ಕೂ ಹೆಚ್ಚಾಗುತ್ತಿದೆ. ಹೀಗಾಗಿ ಇನ್ನೊಂದು ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲು ಕೆಪಿಸಿಸಿ ನಿರ್ಧರಿಸಿದೆ. ಇನ್ನೂ 180-200 ಮುಖಂಡರಿಗೆ ಕಾರ್ಯದರ್ಶಿ ಸೇರಿ ವಿವಿಧ ಸ್ಥಾನ ಕಲ್ಪಿಸಲು ಬಯಸಿದ್ದು, ಚರ್ಚೆಯೂ ನಡೆದಿದೆ. ಅಸಮಾಧಾನಿತರ ಪಟ್ಟಿ ಮಾಡಿ, ಮುಂದಿನ ಪಟ್ಟಿಯಲ್ಲಿ ನಿಮ್ಮ ಹೆಸರಿರಲಿದೆ ಎಂದೂ ಸಮಾಧಾನ ಮಾಡಲಾಗುತ್ತಿದೆ.
ಪಕ್ಷವನ್ನು ನಿರಂತರವಾಗಿ ಸಮರ್ಥಿಸಿಕೊಂಡು, ಹೋರಾಟದಲ್ಲಿ ತೊಡಗಿಸಿಕೊಂಡವರಿಗೆ ಸಂಘಟನೆಯಲ್ಲಿ ಜವಾಬ್ದಾರಿ ಸಿಗದೆ ಇರುವುದರ ಲಾಭ ಪಡೆದುಕೊಳ್ಳಲು ಆಮ್ ಆದ್ಮಿ ಪಕ್ಷ ಹಾಗೂ ಜೆಡಿಎಸ್ ಮುಂದಾಗಿವೆ. ಅವಕಾಶ ವಂಚಿತರಿಗೆ ಆಮ್ ಆದ್ಮಿ ನಾಯಕರು ಕರೆ ಮಾಡಿ ಆಹ್ವಾನ ನೀಡಿರುವುದು ಖಾತ್ರಿಯಾಗಿದೆ, ಒಬ್ಬ ಪ್ರಮುಖ ನಾಯಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯಿಂದ ಟಿಕೆಟ್ ನೀಡುವುದಾಗಿಯೂ ಆಫರ್ ಬಂದಿದೆ.