ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಕುರಿತು ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಮಂತ್ರಿ ಮಾಡುವುದಾಗಿ ಹೇಳಿದ್ದರು. ಖುದ್ದು ರಾಹುಲ್ ಗಾಂಧಿ ಮನೆಗೆ ಬರಲು ತಯಾರಿ ಮಾಡಿಕೊಂಡಿದ್ದರು. ಆದರೆ ತಂದೆ ಸ್ಥಾನದಲ್ಲಿರುವ ದೇವೇಗೌಡರ ಮಾತಿಗೆ ಮಣಿದು ಜೆಡಿಎಸ್ ಪಕ್ಷದಲ್ಲಿಯೇ ಉಳಿದುಕೊಂಡೆ. ಮುಂದಿನ ಮೂರು ವರ್ಷ ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ. ಮುಂದೆ ಕಾಂಗ್ರೆಸ್ ಸೇರಬೇಕೋ ಬೇಡವೋ ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ನನ್ನ ಮಾತು ಕೇಳಲಿಲ್ಲ: ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ಕುರಿತು ಪ್ರತಿಕ್ರಿಯಿಸಿ, ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಸಿ.ಪಿ.ಯೋಗೇಶ್ವರ್ ಅವರನ್ನು ಒಗ್ಗೂಡಿಸಿದ್ದು ನಾನು. ಕೊನೆಗೆ ಅವರೇ ಸಂಸತ್ ಚುನಾವಣೆಯಲ್ಲಿ ಒಂದಾಗಿದ್ದರು. ಬಳಿಕ ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ಒಳಗಾದರು. ಮೂರು ಬಾರಿ ಅವರೇ ಚನ್ನಪಟ್ಟಣದಲ್ಲಿ ನಮ್ಮ ಅಭ್ಯರ್ಥಿ ಸೋಲುತ್ತಾನೆ ಎಂದು ಹೇಳಿದ್ದರು. ಅದೇ ವಿಚಾರಕ್ಕೆ ನನಗೂ ಅವರಿಗೂ ಮನಸ್ತಾಪ ಉಂಟಾಯಿತು. ಇದರಿಂದಾಗಿ ನನ್ನ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡರು ಎಂದು ತಿಳಿಸಿದರು.
ಮುನಿಸು ಇರುವುದು ಸತ್ಯ: ಯೋಗೇಶ್ವರ್, ನಿಖಿಲ್ ಪೈಕಿ ಯಾರಿಗಾದರೂ ಟಿಕೆಟ್ ಕೊಡಿ. ಆದರೆ ಯೋಗೇಶ್ವರ್ ಅವರನ್ನು ಜೊತೆಯಲ್ಲಿ ಇಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಚನ್ನಪಟ್ಟಣ ಸೋಲುವ ಕ್ಷೇತ್ರವಲ್ಲ. ನನಗೆ ಕುಮಾರಸ್ವಾಮಿ ಮೇಲೆ ಮುನಿಸಿರುವುದು ಸತ್ಯ. ಸಾ.ರಾ. ಮಹೇಶ್ ವಿಚಾರದಲ್ಲಿ ಬೇಸರವಿದೆ. ಸಿದ್ದರಾಮಯ್ಯಗೆ ಜಿಟಿಡಿ ಬಗ್ಗೆ ಗೊತ್ತು. ನೇರವಾಗಿ ಸತ್ಯ ಹೇಳುತ್ತೇನೆ ಎಂಬುದು ಗೊತ್ತಿದೆ. ಈವರೆಗೂ ಯಾವುದೇ ಸಣ್ಣ ಕೆಲಸಕ್ಕೂ ಸಿದ್ದರಾಮಯ್ಯ, ಡಿಕೆಶಿ ಬಳಿ ಹೋಗಿಲ್ಲ, ಆದರೆ ಇನ್ನು ಮುಂದೆ ಹೋಗುತ್ತೇನೆ ಎಂದರು.