ನ್ಯೂಸ್

ಕಾಂಗ್ರೆಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತ್ಯುತ್ಸವ

ದಾವಣಗೆರೆ:ಶ್ರೀರಾಮ ಇಡೀ ದೇಶದ ಜನರ ಸ್ವತ್ತು. ಕೇವಲ ಬಿಜೆಪಿಯವರಿಗೆ ಸೀಮಿತ ವ್ಯಕ್ತಿಯಲ್ಲ ಎಂದು ಕಾಂಗ್ರೆಸ್‌ನ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಕೆ.ಎಚ್.ಓಬಳಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಹಾಗೂ ಮಾಜಿ ಪ್ರಧಾನಿ ವಲ್ಲಭಬಾಯಿ ಪಟೇಲ್ ಅವರ ಜಯಂತ್ಯುತ್ಸವ ಹಾಗೂ ದಿ.ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯದಲ್ಲಿ ಕೇವಲ ರಾಮನ ಚರಿತ್ರೆ ಮಾತ್ರವಲ್ಲ. ನಮ್ಮ ಜೀವನ ರೂಪಿಸಿಕೊಳ್ಳಲು ಅದು ಮಾರ್ಗದರ್ಶನ ನೀಡುತ್ತದೆ. ರಾಮನ ವ್ಯಕ್ತಿತ್ವವನ್ನು ಹೇಗೆ ರಚಿತವಾಗಿದೆ ಎಂಬುದನ್ನು ತಿಳಿಯಬೇಕಾದರೆ ಪ್ರತಿಯೊಬ್ಬರೂ ಇದನ್ನು ಓದಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಶುರಾಂ ಮಾಗಾನಹಳ್ಳಿ ಮಾತನಾಡಿ ಬೇಡರಾಗಿ ಜನಿಸಿ ಜಗತ್ತಿಗೆ ರಾಮಾಯಣ ಕೃತಿ ನೀಡುವ ಮೂಲಕ ಮಹಾ ಋಷಿ ವಾಲ್ಮೀಕಿ ಜಗದ ಬೆಳಕಾಗಿದ್ದಾರೆ ಎಂದರು. ಇಂದಿನ ರಾವಣ ರಾಜ್ಯ ಸರ್ಕಾರವನ್ನು ಕಿತ್ತೊಗೆದು ಗಾಂಧಿ ಕಲ್ಪನೆಯ ರಾಮರಾಜ್ಯದ ಸರ್ಕಾರ ತರಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಹೇಳಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ ಬಿಜೆಪಿಯವರು ಬಿಂಬಿಸುವಂತೆ ಶ್ರೀರಾಮ ಒಂದು ಪಕ್ಷಕ್ಕೆ ಸೀಮಿತವಲ್ಲ. ಆತ ಎಲ್ಲರ ರಾಮನಾಗಿದ್ದಾನೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡ ಎಸ್. ಮಲ್ಲಿಕಾರ್ಜುನ, ಜಿಲ್ಲಾ ಪ್ರ.ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಪಾಲಿಕೆ ವಿಪಕ್ಷನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಮೈನುದ್ದೀನ್, ಡೋಲಿ ಚಂದ್ರು ಇತರರಿದ್ದರು.

----