ನ್ಯೂಸ್

ಕಸಾಯಿಖಾನೆಯಲ್ಲಿ ಬಲಿಯಾಗಬೇಕಿದ್ದ ನಾಟಿ ಹಸುಗಳ ರಕ್ಷಣೆ

ಚಿಕ್ಕಬಳ್ಳಾಪುರ: ನಿರಂತರ ರಾಸುಗಳ ಕಳ್ಳತನ, ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವುದಕ್ಕೆ ಕಡಿವಾಣ ಬಿದ್ದಿಲ್ಲ. ದಂಧೆಕೋರರು ಮೂಕಜೀವಿಗಳ ಮೂಲಕ ಕದ್ದು ಮುಚ್ಚಿ ಕಳ್ಳ ವ್ಯಾಪಾರ ನಡೆಸುತ್ತಿದ್ದಾರೆ. ಇದರ ನಡುವೆ ಬಾಗೇಪಲ್ಲಿ ತಾಲೂಕಿನ ಗೂಳೂರಿನಲ್ಲಿ 25 ನಾಟಿ ಹಸುಗಳನ್ನು ರಕ್ಷಿಸಿ, ಗೋ ಶಾಲೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ.

ಲಾರಿಯಲ್ಲಿ 25 ಹಸುಗಳನ್ನು ಆಂಧ್ರದ ಕಡೆಯಿಂದ ಬೆಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಣೆ ಮಾಡಲಾಗುತ್ತಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಮಂಡಲ ಅಧ್ಯಕ್ಷ ಪ್ರತಾಪ್ ಮತ್ತು ಅವರ ಬೆಂಬಲಿಗರು ವಾಹನವನ್ನು ತಡೆದಿದ್ದಾರೆ. ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಂಡು ರಾಸುಗಳನ್ನು ಮತ್ತು ಲಾರಿಯನ್ನು ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕ ಅಬೀಬುಲ್ಲಾ ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ಘಾಟಿಯಲ್ಲಿರುವ ಸುರಭಿ ಗೋಶಾಲೆಗೆ ನಾಟಿ ಹಸುಗಳನ್ನು ಕಳುಹಿಸಲಾಗುತ್ತಿದೆ. ಬಾಗೇಪಲ್ಲಿ ಮತ್ತು ಬೆಂಗಳೂರು ಮಾರ್ಗ ದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಿರಂತರವಾಗಿ ರಾಸುಗಳನ್ನು ವಾಹನಗಳಲ್ಲಿ ಕಸಾಯಿಖಾನೆಗೆ ಸಾಗಿಸುವ ದಂಧೆ ನಡೆಯುತ್ತಿದೆ. ರಾತ್ರೋರಾತ್ರಿ ಸುತ್ತಲಿನ ಹಳ್ಳಿಗಳಲ್ಲಿ ಹೆಚ್ಚಿಗೆ ಹಸುಗಳ ಕಳ್ಳತನವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.