ನ್ಯೂಸ್

ಕಸ ವಿಲೇವಾರಿ ಕಡ್ಡಾಯ,ತ್ಯಾಜ್ಯ ನಿಯಮ ಮೀರಿದರೆ ದಂಡ

ಚಿಕ್ಕಬಳ್ಳಾಪುರ : ನಗರದ ಅಂಗಡಿ ಮುಂಗಟ್ಟುಗಳ ಮುಂದೆ ಶೇ.100ರಷ್ಟು ತ್ಯಾಜ್ಯ ವಿಲೇವಾರಿ ಮಾಡಬೇಕು, ನಿಯಮ ಮೀರಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಸಭೆಯಲ್ಲಿ ಮಾತನಾಡಿ, ಸ್ವಚ್ಛಾ ಸರ್ವೇಕ್ಷಣಾ 2020ರ ದಕ್ಷಿಣಾ ವಲಯದಲ್ಲಿ ಚಿಕ್ಕಬಳ್ಳಾಪುರ 9ನೇ ಸ್ಥಾನದಲ್ಲಿದೆ. ಅದನ್ನು ಪ್ರಥಮ ಸ್ಥಾನಕ್ಕೆ ತರಲು ವರ್ತಕರು, ವ್ಯಾಪಾರಸ್ಥರು ಹಾಗೂ ನಾಗರಿಕರು ಸ್ಥಳೀಯ ಆಡಳಿತಗಳಿಗೆ ಸಹಕಾರ ನೀಡಬೇಕು ಎಂದರು.

ಅಂಗಡಿ ಮುಂಗಟ್ಟುಗಳ ಮುಂದೆ ಬುಟ್ಟಿ ಇಡಬೇಕು, ಸಂಗ್ರಹವಾಗು ಕಸವನ್ನು ನಗರಸಭೆ ವಾಹನಕ್ಕೆ ನೀಡಬೇಕು. ಬಟ್ಟೆಯಲ್ಲಿ ಮಾಡಿದ ಕ್ಯಾರಿ ಬ್ಯಾಗ್‌ಗಳನ್ನು ಬಳಸವಂತೆ ಸಲಹೆ ನೀಡಿದರು.

ಹೋಟೆಲ್‌ಮತ್ತು ಟೀ ಅಂಗಡಿ ವ್ಯಾಪಾರಸ್ಥರು, ಪ್ಲಾಸ್ಟಿಕ್ ಲೋಟ, ಪೇಪರ್ ಕಫ್ ಬದಲಾಗಿ ಅಡಿಕೆ ತಟ್ಟೆಗಳನ್ನು ಬಳಕೆ ಮಾಡಬೇಕು. 2 ಬುಟ್ಟಿಗಳನ್ನು ಕಡ್ಡಾಯವಾಗಿ ಇಟ್ಟು, ಹಸಿ ಮತ್ತು ಒಣ ತ್ಯಾಜ್ಯವಾಗಿ ವಿಂಗಡಿಸಿ ಸಂಗ್ರಹಣೆ ಮಾಡಬೇಕು, ಈ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಅಥವಾ ಅಂಗಡಿ ಮುಂಭಾಗ ಕಸ ಹಾಕಿದರೆ ದಂಡ ವಿಧಿಸಲಾಗುತ್ತದೆ, ಮರುಕಳುಹಿಸಿದರೆ ಅಂಗಡಿಯ ಬಾಗಿಲು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಡಿಸಿ, ಬುಧವಾರದಿಂದ ದಂಡ ವಿಧಿಸಲಾಗುವುದು ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಡಿವೈಎಸ್‌ಪಿ ರವಿಶಂಕರ್, ವಿವಿಧ ವರ್ತಕರು, ವ್ಯಾಪಾರಸ್ಥರು ಉಪಸ್ಥಿತರಿದ್ದರು.