ಲಿಂಗದಹಳ್ಳಿ: ಅರಣ್ಯ ಉತ್ಪನ್ನವಾಗಿದ್ದ ಶ್ರೀಗಂಧವನ್ನು ರೈತರು ಜಮೀನಿನಲ್ಲಿ ಬೆಳೆಸುತ್ತಿದ್ದು, ಬೆಳೆಸಿದ ಶ್ರೀಗಂಧವನ್ನು ಕಳ್ಳರಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಸರ್ಕಾರ ಶ್ರೀಗಂಧ ಕಳ್ಳಸಾಗಣೆಗೆ ಕಡಿವಾಣ ಹಾಕಬೇಕಾಗಿದೆ ಎಂದು ಸಾಣೆಹಳ್ಳಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಲ್ಲತ್ತಿಗಿರಿ ಸಮೀಪದ ಶ್ರೀಗಂಧದ ಗುಡಿ 5ರಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಉಚಿತ ವಸತಿ ಕುಟೀರ ಮತ್ತು ಶ್ರೀಗಂಧ ಮೌಲ್ಯವರ್ಧನ ವಿಚಾರ ಸಂಕಿರಣದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, 15-30 ವರ್ಷಗಳ ಕಾಲ ಮಕ್ಕಳಂತೆ ಶ್ರೀಗಂಧವನ್ನು ಬೆಳೆಸುವ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗಲಿದೆ ಎಂದರು.
ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಪರಿಸರ ಪ್ರೇಮಿಯೂ ಆಗಿದ್ದು ಕಾಡುಪ್ರಾಣಿಗಳು, ಜೇನು ದುಂಬಿಗಳಂತಹ ಕೀಟಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಮಾಡುವ ಮೂಲಕ ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಶ್ರೀಗಂಧ ಮೌಲ್ಯವರ್ಧನ ವಿಚಾರ ಸಂಕಿರಣ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಶ್ರೀಗಂಧ ಬೆಳೆಯ ಮಾಹಿತಿ ಇಲ್ಲದವರೆಲ್ಲರನ್ನೂ ಒಂದೆಡೆ ಸೇರಿಸಿ ಅಗತ್ಯ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ರೈತ ಸಂಘದ ಮುಖಂಡರಾದ ಕೆ.ಟಿ.ಗಂಗಾಧರಪ್ಪ, ಹಿರಿಯ ಸಂಶೋಧಕ ಅನಂತ ಪದ್ಮನಾಭ, ಶ್ರೀಗಂಧ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಜಯ್, ಕರವೇ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಕೃಷ್ಣೇಗೌಡ, ಶ್ರೀಗಂಧ ಬೆಳೆಗಾರರಾದ ಟಿ.ಎನ್.ವಿಶುಕುಮಾರ್ ಮತ್ತು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಶ್ರೀಗಂಧ ಬೆಳೆಗಾರರು, ಸಾರ್ವಜನಿಕರು ಪಾಲ್ಗೊಂಡಿದ್ದರು.