ನ್ಯೂಸ್

ಕಳ್ಳತನದ ಆರೋಪಿ ಆಸ್ಪತ್ರೆಯಲ್ಲಿ ಸಾವು

ವಿಜಯವಾಣಿ ಸುದ್ದಿಜಾಲ ಕೋಲಾರ

ಕಳ್ಳತನದ ಆರೋಪದ ಮೇಲೆ ವಿಚಾರಣೆಗೆ ಕರೆದೊಯ್ದ ವ್ಯಕ್ತಿ ಅಸ್ವಸ್ಥಗೊಂಡ ಕಾರಣ ಆತನನ್ನು ಕೋಲಾರ ನಗರದ ಎಸ್.ಎನ್.ಆರ್.ಆಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆಯೊಂದು ನಡೆದಿದೆ.

ಮೃತಪಟ್ಟ ವ್ಯಕ್ತಿ ಆಂಧ್ರ ಪ್ರದೇಶ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಗ್ರಾಮದ ಮುನಿರಾಜು (೪೦) ಎಂದು ಗುರ್ತಿಸಲಾಗಿದೆ. ಸದರಿ ಆರೋಪಿ ಕಳೆದ ೨ ದಿನಗಳ ಹಿಂದೆ ಮುಳಬಾಗಿಲು ತಾಲ್ಲೂಕು ನಂಗಲಿ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅನುಮಾನಗೊಂಡ ನಂಗಲಿ ಪೋಲಿಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೋಲಾರ ಸುತ್ತಮುತ್ತ ದ್ವಿಚಕ್ರ ವಾಹನಗಳನ್ನು ಕದ್ದು ನಂಬರ್ ಬದಲಾಯಿಸಿ ಮಾರಾಟ ಮಾಡುತ್ತಿದಿದ್ದು ಬೆಳಕಿಗೆ ಬಂದಿದೆ.

ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಪೋಲಿಸರು ಕೋಲಾರ ನಗರದ ಎಸ್.ಎನ್.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರಿಶೀಲಿಸಿದಾಗ ಎರಡು ಕಿಡ್ನಿಗಳು ಕಳೆದುಕೊಂಡಿರುವುದು ಗೊತ್ತಾಗಿದೆ. ಆದರೆ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ಮಂಗಳವಾರ ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೋಲಾರ ಗ್ರಾಮಾಂತರ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.