ನ್ಯೂಸ್

ಕಳೆದ ೨ ದಿನಗಳಿಂದ ಕೋಲಾರದಲ್ಲಿ ಮುಂಗಾರು ಮಳೆ ಸದ್ದು / ಜೋರು ಮಳೆ ಇಲ್ಲ ತುಂತುರು ಮಳೆಗೆ ಸೀಮಿತ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಳೆದ ಎರಡು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ಮುಂಗಾರು ಮಳೆ ಸದ್ದು ಮಾಡುತ್ತಿದೆ. ಶುಕ್ರವಾರ ರಾತ್ರಿ ಮತ್ತು ಶನಿವಾರ ರಾತ್ರಿ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ಭಾನುವಾರವೂ ಮದ್ಯಾಹ್ನದ ನಂತರ ಮೋಡ ಮುಚ್ಚಿದ ವಾತಾವರಣ ಮತ್ತು ಗುಡುಗು ಸಹಿತ ಅಲ್ಲಲ್ಲಿ ಮಳೆಯಾಗುವ ಸೂಚನೆ ಕಂಡು ಬಂದಿತು.

ಮುಂಗಾರು ಮುನ್ನವೇ ಜಿಲ್ಲೆಯಲ್ಲಿ ಸ್ವಲ್ಪ ಮಳೆಯಾಗಿದ್ದು, ಇದೀಗ ಯುಗಾದಿ ಕಳೆದ ನಂತರ ಪ್ರಥಮ ಮುಂಗಾರು ಮಳೆ ಇದಾಗಿರುವುದರಿಂದ ಮಾವು ಸಹಿತ ತರಕಾರಿ ಬೆಳೆಗಳಿಗೆ ತಂಪು ತಂದAತೆ ಆಗಿದೆ. ಮುಂಗಾರು ಉಳುಮೆ ಮಾಡಿಕೊಳ್ಳಲು ಇದು ಕಾಲಾವಕಾಶವೂ ಆಗಿದೆ.

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಯುಗಾದಿ ಮುಗಿದ ಎರಡು ವಾರಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿರುವುದರಿಂದ ರೈತರಲ್ಲಿ ಹರ್ಷ ತಂದAತಾಗಿದೆ. ಮಾವಿನ ಫಸಲಿಗೆ ಸೂಕ್ತ ಕಾಲದಲ್ಲಿ ಮಳೆ ಬಂದAತಾಗಿದೆ. ಬಿರುಗಾಳಿ ಮತ್ತು ಆಲಿಕಲ್ಲು ಇಲ್ಲದೆ ಮಳೆ ಸುರಿದರೆ ರೈತರಿಗೆ ಯಾವುದೇ ರೀತಿಯ ನಷ್ಟ ಉಂಟಾಗುವುದಿಲ್ಲ. ಬಿರುಗಾಳಿ ಮತ್ತು ಆಲಿಕಲ್ಲು ಬಿದ್ದರೆ ಮಾವಿನ ಫಸಲಿಗೂ ಹಾಗು ಟಮೋಟ ಸೇರಿದಂತೆ ವಿವಿಧ ಟಮೋಟ ಬೆಳೆಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಏಪ್ರಿಲ್ ನಂತರ ಉಷ್ಣಾಂಶ ಜಿಲ್ಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಾ ಹೋಯಿತು. ಶುಕ್ರವಾರದಿಂದ ಮುಂಗಾರು ಮಳೆ ಸಂಜೆಯ ನಂತರ ತಂಪೆರೆಯುತ್ತಿರುವುದರಿAದ ಮತ್ತಷ್ಟು ಸೆಕೆ ರಾತ್ರಿ ವೇಳೆ ಹೆಚ್ಚಾಗುತ್ತಿದೆ. ಮಳೆ ಜೋರಾಗಿ ಬಾರದೆ ತುಂತುರು ಮಳೆ ಕಾಣಿಸಿಕೊಳ್ಳುತ್ತಿರುವುದರಿಂದ ಆಗಾಗ ವಿದ್ಯುತ್ ಕೈಕೊಡುತ್ತಿರುವುದರಿಂದ ರಾತ್ರಿ ವೇಳೆ ಮನೆಗಳಲ್ಲಿ ಇರಲು ಸಾಧ್ಯವಿಲ್ಲದ ರೀತಿ ಆಗಿದೆ.

ಮುಂಗಾರು ಮಳೆ ಪ್ರಾರಂಭದಲ್ಲೇ ಮಧ್ಯಾಹ್ನದ ತನಕ ಉಷ್ಣಾಂಶ ಹೆಚ್ಚಾಗಿ ಮಧ್ಯಾಹ್ನದ ನಂತರ ಮೋಡ ಮುಚ್ಚಿದ ವಾತಾವರಣ ಕಂಡು ಬರುತ್ತಿದೆ. ಜೋರು ಮಳೆ ಇಲ್ಲದೆ ಅಲ್ಲಲ್ಲಿ ತುಂತುರು ಮಳೆ ಜೊತೆಗೆ ಅಲ್ಪ ಸ್ವಲ್ಪ ಮಳೆ ಆಗುತ್ತಿದೆ. ಈ ಮಳೆ ಯಾವುದಕ್ಕೂ ಪ್ರಯೋಜನವಿಲ್ಲ ಜೋರು ಮಳೆಯಾದರೆ ಉಳುಮೆ ಮಾಡಿಕೊಳ್ಳಬಹುದು. ಅದಕ್ಕೂ ಸಾಕಾಗುತ್ತಿಲ್ಲ ಎನ್ನುತ್ತಿದ್ದಾರೆ ರೈತರು.