ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಎಲೆಕೋಸಿಗೆ ಕಳೆದ ಒಂದು ವರ್ಷದಿಂದ ಬೆಲೆ ಏರಿಕೆ ಆಗದ ಕಾರಣ ಕೋಸು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ೧೨ ಟನ್ ಲಾರಿ ಲೋಡು ೬೦ ಸಾವಿರದಿಂದ ೭೦ ಸಾವಿರ ರೂ.ಗಳ ತನಕ ಮಾರಾಟವಾಗುತ್ತಿದೆ. ರೈತರು ಬೆಳೆ ಮಾಡಲು ಹಾಕಿದ ಬಂಡವಾಳ ಬಾರದಂತೆ ಆಗಿದೆ.
ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದ್ದು, ಉತ್ತಮ ಫಸಲು ಬಂದಿದ್ದರು ತೇವಾಂಶದಿAದಾಗಿ ಮಚ್ಚೆ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ಕೋಸಿಗೆ ಬೆಲೆ ಕುಸಿದಿದೆ ಎಂದು ರೈತರ ಬಳಿ ಕಡಿಮೆ ಬೆಲೆಗೆ ಖರೀದಿಗೆ ಮುಂದಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ರೈತರ ಬಳಿ ಖರೀದಿಸುವ ವ್ಯಾಪಾರಸ್ಥರು ಗುಣಮಟ್ಟದ ಕೋಸು ಇಲ್ಲ ಎಂದು ಕಡಿಮೆ ಬೆಲೆಗೆ ಖರೀದಿ ಮಾಡಲು ಮುಂದಾಗುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ಒಂದು ಎಕೆರೆ ಪ್ರದೇಶದಲ್ಲಿ ಕೋಸು ಬೆಳೆಯಲು ೧.೫ ಲಕ್ಷ ರೂ.ಗಳು ಖರ್ಚು ಬರುತ್ತಿದ್ದು, ಒಂದು ಎಕೆರೆ ಪ್ರದೇಶದಲ್ಲಿ ಉತ್ತಮ ಫಸಲು ಬಂದರೆ ೨ ರಿಂದ ೨.೫ ಲೋಡು ಆಗುತ್ತಿತ್ತು. ಈಗಿನ ಪರಿಸ್ಥಿತಿಯಲ್ಲಿ ರೈತನು ಹಾಕಿದ ಬಂಡವಾಳವು ಬಾರದಂತೆ ಆಗಿದ್ದು, ಬೆಲೆ ಇಲ್ಲದ ಕಾರಣ ರೈತರ ತೋಟಗಳಲ್ಲಿ ಕೋಸು ಕೊಳೆಯುವಂತೆ ಆಗಿದೆ.
ಒಂದು ಲೋಡು ಕೋಸು ಒಂದು ಲಕ್ಷಕ್ಕಿಂತ ಹೆಚ್ಚಾಗಿ ಮಾರಾಟವಾದರೆ ಮಾತ್ರ ರೈತರು ಹಾಕಿದ ಬಂಡವಾಳ ಕೈಸೇರುತ್ತದೆ. ೫೦ ರಿಂದ ೬೦ ಸಾವಿರ ರೂ.ಗಳಿಗೆ ಮಾರಾಟವಾದರೆ ಕೋಸು ಕಿತ್ತು ಮಾರುಕಟ್ಟೆಗೆ ತರುವ ಕೂಲಿ ಮತ್ತು ಸಾಗಾಣಿಕೆ ವೆಚ್ಚವು ಬಾರದೆ ಇರುವ ಕಾರಣ ತೋಟಗಳಲ್ಲಿಯೇ ಕೋಸು ರೈತರು ಬಿಡುವಂತೆ ಆಗಿದೆ.
ಮಳೆ ಇರುವ ಕಾರಣ ಬೇರೆ ರಾಜ್ಯ ಮತ್ತು ರಾಜ್ಯದ ಇತರೆ ಭಾಗಗಳಲ್ಲಿ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೂ ವ್ಯಾಪಾರಸ್ಥರು ಬಾರದೆ ಇರುವುದರಿಂದ ಕೋಸಿನ ಬೆಲೆ ಕುಸಿಯಲು ಕಾರಣವಾಗಿದೆ. ಕಟಾವಿಗೆ ಬಂದು ಕೋಸು ಒಂದು ವಾರ ಇಟ್ಟುಕೊಂಡರೆ ಅದು ಮಚ್ಚೆ ರೋಗಕ್ಕೆ ಬರುತ್ತದೆ. ಹಾಗೂ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಗುಣಮಟ್ಟ ಇಲ್ಲದೆ ಆಗುತ್ತಿದ್ದು, ಬೆಲೆ ಕುಸಿಯಲು ಮತ್ತೊಂದು ಕಾರಣವಾಗಿದೆ ಎಂದು ವ್ಯಾಪಾರಸ್ಥರು ತಿಳಿಸುತ್ತಿದ್ದಾರೆ.
ಬಾಕ್ಸ್
ಟೊಮೆಟೋ ಸೇರಿದಂತೆ ಕೋಸು, ಕ್ಯಾಪ್ಸಿಕಂ ಮುಂತಾದ ತರಕಾರಿ ಬೆಳೆಗಳಿಗೆ ನಿರಂತರವಾಗಿ ಬೆಲೆ ಕುಸಿತ ಕಂಡಿದೆ. ವೈರಸ್ ಕಾಟದ ಮಧ್ಯೆಯು ರೈತರು ಉತ್ತಮ ಫಸಲನ್ನು ತೆಗೆಯುತ್ತಿದ್ದರೂ ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಸಿಗದೆ ಸ್ಥಳೀಯ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಹೆಚ್ಚಾಗಿ ಬರದ ಕಾರಣ ಬೆಲೆ ಕುಸಿಯಲು ಕಾರಣವಾಗಿದೆ. ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ರೈತರು ಒತ್ತಾಯಪಡಿಸುತ್ತಿದ್ದಾರೆ.
ಕೋಟ್
ಕಳೆದ ಒಂದು ವರ್ಷದಿಂದ ಸತತವಾಗಿ ಕೋಸಿಗೆ ಬೆಲೆ ಏರಿಕೆ ಆಗಲೇ ಇಲ್ಲ. ಇತ್ತೀಚೆಗೆ ತೇವಾಂಶಗಳು ಹೆಚ್ಚಾಗುತ್ತಿದೆ. ಇದರಿಂದ ಕೋಸಿನ ಬುಡಕ್ಕೆ ಡ್ಯಾಗ್ ರೋಗ ಆವರಿಸಿಕೊಳ್ಳುತ್ತಿದೆ. ಜೊತೆಗೆ ಮಚ್ಚೆರೋಗವು ಕಾಣಿಸಿಕೊಳ್ಳುತ್ತಿದೆ. ರೈತರು ಹೆಚ್ಚಾಗಿ ಕೋಸು ಬೆಳೆಯುತ್ತಿರುವುದರಿಂದ ಅಗತ್ಯಕ್ಕಿಂತ ಹೆಚ್ಚಾಗಿ ಫಸಲು ಸಿಗುತ್ತಿದ್ದು, ವ್ಯಾಪಾರಸ್ಥರು ವಿನಾಕಾರಣ ಗುಣಮಟ್ಟವಿಲ್ಲವೆಂದು ಬೆಲೆ ಕಡಿಮೆ ಮಾಡುತ್ತಿದ್ದಾರೆ. ಗ್ರಾಹಕರಿಗೆ ವ್ಯಾಪಾರಸ್ಥರು ಕೆ.ಜಿ.ಗೆ ೮ ರಿಂದ ೧೦ ರೂ.ಗಳ ತನಕ ಮಾರಾಟ ಮಾಡುತ್ತಿದ್ದಾರೆ. ರೈತರ ಬಳಿ ಮಾತ್ರ ಬೆಲೆ ಇಲ್ಲ ಎಂದು ಹೇಳುತ್ತಿದ್ದಾರೆ. ಕೋಸು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ನೀಡಬೇಕು ಎಂಬುದು ರೈತರ ಒತ್ತಾಯ.
-ಚಿಕ್ಕವೆಂಕಟರೆಡ್ಡಿ, ಕೋಸು ಬೆಳೆಗಾರ.
ಚಿತ್ರ ೦೩ ಕೆ.ಎಲ್.ಆರ್. ೦೧ : ಬೆಲೆ ಇಲ್ಲದ ಕಾರಣ ಕಟಾವಿಗೆ ಬಂದಿದ್ದರೂ ತೋಟದಲ್ಲಿಯೇ ಕೋಸು ಕೊಳೆಯುತ್ತಿರುವುದು.
ಚಿತ್ರ ೦೩ ಕೆ.ಎಲ್.ಆರ್. ೦೧ಎ : ಚಿಕ್ಕವೆಂಕಟರೆಡ್ಡಿ, ಕೋಸು ಬೆಳೆಗಾರ. ರವರ ಭಾವಚಿತ್ರ