ಕಳಸ ತಾಲೂಕು ಕಚೇರಿ. 
ನ್ಯೂಸ್

ಕಳಸಕ್ಕೆ 3 ತಿಂಗಳಿಗೊಮ್ಮೆ ಹೊಸ ತಹಸೀಲ್ದಾರ್ ಭಾಗ್ಯ!

ಕಳಸ: ತಾಲೂಕು ಕಚೇರಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 9 ತಹಸೀಲ್ದಾರ್ ಕರ್ತವ್ಯ ನಿರ್ವಹಿಸಿದ್ದಾರೆ. ಆದರೂ ತಾಲೂಕು ಕೇಂದ್ರದಲ್ಲಿ ಇರಬೇಕಾದ ಯಾವುದೇ ಕಚೇರಿಗಳು ಇರದ ಕಾರಣ ಕಳಸ ಶಂಕಿತ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

ಕಳಸ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಸದಾ ಮುಂಚೂಣಿಯಲ್ಲಿರುವ ತಾಲೂಕು ಕೇಂದ್ರ. ಹೋಬಳಿಯಾಗಿದ್ದ ಕಳಸ ತಾಲೂಕು ಕೇಂದ್ರವಾಗಬೇಕು ಎಂದು ಸತತ ಮೂರು ದಶಕಗಳಿಂದ ನಡೆದ ಎಲ್ಲ ರಾಜಕೀಯ, ಸಂಘ ಸಂಸ್ಥೆಗಳ ಹೋರಾಟದ ಲವಾಗಿ 2019ರ ಫೆಬ್ರವರಿಯಲ್ಲಿ ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದರು. ಸತತ ಹೋರಾಟದ ಪರಿಣಾಮ 2021 ಜೂ.22ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳಸ ತಾಲೂಕು ಎಂದು ಅಂತಿಮ ಅಧಿಸೂಚನೆ ಹೊರಡಿಸಿದರು.

ಅಂದಿನಿಂದ ತಾಲೂಕು ಕಚೇರಿ ತೆರೆಯಲು ಕುಂಟುತ್ತ ಸಾಗಿ ಬಂದು 2022 ಜ.14ರಂದು ಮೂಡಿಗೆರೆ ತಹಸೀಲ್ದಾರ್ ನಾಗರಾಜ್ ಅವರು ಪ್ರಭಾರಿಯಾಗಿ ಕಳಸ ತಾಲೂಕಿನ ಮೊದಲ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡರು. ಅಂದು ತರಾತುರಿಯಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಕಚೇರಿಯ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಲಿಲ್ಲ ಎಂದು ಒಂದಷ್ಟು ಮುಖಂಡರು ಬೇಸರವನ್ನು ವ್ಯಕ್ತಪಡಿಸಿದ್ದರು. ಅಂದಿನಿಂದ ಕಳಸ ತಾಲೂಕು ಕಚೇರಿ ಸದಾ ಒಂದಲ್ಲ ಒಂದು ಸಮಸ್ಯೆಗಳಿಂದ ಸುದ್ದಿಯಾಗುತ್ತಿದೆ. ಒಬ್ಬರೇ ತಹಸೀಲ್ದಾರ್ ಕಳಸ ತಾಲೂಕಿನಲ್ಲಿ ಸರಿಯಾಗಿ ನೆಲೆಯೂರದೆ ಮೂರ‌್ನಾಲ್ಕು ತಿಂಗಳಿಗೊಬ್ಬರಂತೆ ತಹಸೀಲ್ದಾರ್ ಬದಲಾವಣೆಯಾಗುತ್ತಿದ್ದು ಪ್ರಸ್ತುತ ಕಳಸ ತಾಲೂಕಿನ 9ನೇ ತಹಸೀಲ್ದಾರ್ ಆಗಿ ಎಸ್.ಶಾರದಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಒಂದು ತಾಲೂಕು ಎಂದು ಹೇಳಲು 28ಕ್ಕೂ ಹೆಚ್ಚು ಕಚೇರಿಗಳು ಇರಬೇಕು. ಇತ್ತೀಚೆಗೆ ಕಳಸ ತಾಪಂ ಕಚೇರಿ ಒಂದು ಆಗಿರುವುದು ಬಿಟ್ಟರೆ ಇನ್ಯಾವುದೇ ಕಚೇರಿ ತೆರೆಯುವ ಭಾಗ್ಯಾ ಕಳಸಕ್ಕೆ ಬಂದಿಲ್ಲ. ತಹಸೀಲ್ದಾರ್ ಹುದ್ದೆಗೆ 3 ತಿಂಗಳಿಗೆ ಓರ್ವರಂತೆ ಹೊಸ ತಹಸೀಲ್ದಾರ್ ಬರುತ್ತಿದ್ದಾರೆ. ಹೊಸ ತಹಸೀಲ್ದಾರ್ ಬಂದರೆ ಅವರು ಅಧಿಕೃತವಾಗಿ ಕಡತ ಮಂಜೂರು ಮಾಡಲು ಬೆಂಗಳೂರು ಕೇಂದ್ರ ಕಚೇರಿಯಿಂದ ಗುರುತಿನ ಚೀಟಿ ಪಡೆಯಬೇಕಿದೆ. ಈ ಪ್ರಕ್ರಿಯೆಗೆ ಸುಮಾರು 3 ತಿಂಗಳು ಬೇಕಾಗುತ್ತದೆ. ಆದರೆ ಕಳಸದಲ್ಲಿ ಹೊಸ ತಹಸೀಲ್ದಾರ್ ಗುರುತಿನ ಚೀಟಿ ಮಾಡುವಷ್ಟರಲ್ಲಿ ಮತ್ತೊಬ್ಬರು ಬಂದಿರುತ್ತಾರೆ. ಪ್ರಸ್ತುತ 3 ತಿಂಗಳ ಹಿಂದೆ ಬಂದ ತಹಸೀಲ್ದಾರ್ ದಯಾನಂದ ವರ್ಗಾವಣೆಗೊಂಡಿದ್ದು ಚಿಕ್ಕಮಗಳೂರು ಎ.ಸಿ.ಕಚೇರಿಯಲ್ಲಿದ್ದ ಎಸ್.ಶಾರದಾ ಪ್ರಭ್ಟಾ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.