ಚಿತ್ರದುರ್ಗ: ಮುರುಘಾಮಠದಲ್ಲಿ ಕಳವಾಗಿದ್ದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಮೂರ್ತಿ ಶ್ರೀಮಠದ ಆವರಣದಲ್ಲೇ ಸೋಮವಾರ ಗೋಣಿ ಚೀಲವೊಂದರಲ್ಲಿ ಪತ್ತೆಯಾಗಿದೆ.
ಈ ಮುನ್ನ ಮುರುಘಾಮಠ ಪ್ರಾಂಗಣದ ಮೇಲ್ಭಾಗದಲ್ಲಿನ ದರ್ಬಾರ್ ಹಾಲ್‌ನಲ್ಲಿ 22 ಕೆಜಿ ತೂಕದ, 16 ಲಕ್ಷ ರೂ. ಮೌಲ್ಯದ ಮೂರ್ತಿಯನ್ನು ಇಡಲಾಗಿತ್ತು. ಮೂರ್ತಿ ಕಳವಾದ ಸಂಬಂಧ 11 ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಾಲ್ಕು ದಿನದೊಳಗೆ ಮಠದಲ್ಲೇ ಪ್ರತ್ಯಕ್ಷವಾಗಿದ್ದು, ಠಾಣೆಯ ಸಿಪಿಐ ಮುದ್ದುರಾಜ್ ನೇತೃತ್ವದಲ್ಲಿ ಶ್ವಾನದಳ ಮತ್ತು ಬೆರಳಚ್ಚು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಬೆಳ್ಳಿ ಮೂರ್ತಿಯನ್ನು ಆವರಣದ ಶಾಲೆ ಬಳಿ ತಂದಿಟ್ಟಿರುವ ಕಳ್ಳರು ಪರಾರಿಯಾಗಿದ್ದಾರೆ.
ಘಟನೆ ಹಿನ್ನೆಲೆ: ಶರಣರಿಗೆ ಗುರುವಂದನೆಯಾಗಿ 2021 ರ ಶರಣ ಸಂಸ್ಕೃತಿ ಉತ್ಸವದಲ್ಲಿ ಬೆಳ್ಳಿ ಮೂರ್ತಿ ಅರ್ಪಿಸಲಾಗಿತ್ತು. ಆದರೆ, 2024 ರ ಜು. 4 ರಂದು ಕಡೆಯದಾಗಿ ಶ್ರೀಮಠದ ವಿಜಯದೇವರು ನೋಡಿದ್ದರು. ಆನಂತರ ಕಳ್ಳತನ ಬೆಳಕಿಗೆ ಬಂದಿತ್ತು. ಈ ಸಂಬಂಧ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ದೂರು ದಾಖಲಿಸಿದ್ದರು.
ಕಳವು ಪ್ರಕರಣ ಸಂಬಂಧ ಮೂರ್ತಿ ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದ್ದಾರೆ.
ತನಿಖೆಯಿಂದಲೇ ಪ್ರಕರಣ ಬಯಲಾಗಲಿ: ಬೆಳ್ಳಿ ಮೂರ್ತಿ ಪತ್ತೆಯಾಗಿರುವುದು ಸಂತೋಷದ ಸಂಗತಿ. ಪೊಲೀಸರ ತನಿಖೆ ಚುರುಕಾದ ಬೆನ್ನಲ್ಲೇ ಕದ್ದವರು ಮರಳಿ ತಂದು ಇಟ್ಟಿದ್ದಾರೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ಕಳ್ಳತನದ ಕುರಿತು ಕೆಲವರ ಮೇಲೆ ಶಂಕಿಸಿ ತೀವ್ರ ವಿಚಾರಣೆ ನಡೆಸಲಾಗಿದೆ. ನನ್ನ ಮೇಲೂ ಆರೋಪದ ಷಡ್ಯಂತ್ರ ನಡೆದಿತ್ತು. ಈಗ ಶ್ರೀಮಠದ ತಡೆಗೋಡೆ ಹೊರಗಿನಿಂದಲೇ ಮೂರ್ತಿಯನ್ನು ಗೋಣಿ ಚೀಲದಲ್ಲಿಟ್ಟು ಎಸೆದಿದ್ದಾರೆ. ಕಳವು ಮಾಡುವ ಮುನ್ನ ಬುದ್ಧಿವಂತಿಕೆಯಿಂದ ಸಿಸಿ ಟಿವಿ ಆಫ್ ಮಾಡಿದ್ದಾರೆ. ಕದ್ದವರು, ಮರಳಿ ತಂದಿಟ್ಟವರು ಯಾರೆಂಬುದು ಸಮಗ್ರ ತನಿಖೆಯಿಂದ ಬಯಲಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮಠದ ಆಸ್ತಿ ಮೇಲೆ ಕಣ್ಣು: ಮೂರ್ತಿ ಮರಳಿ ಸಿಕ್ಕಿದ್ದು, ಮನಸ್ಸಿಗೆ ಸಮಾಧಾನ ತಂದಿದೆ. ಮಠದ ಸ್ಥಿರಾಸ್ತಿ, ಚರಾಸ್ತಿಗಳ ಮೇಲೂ ಕಣ್ಣು ಹಾಕುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು. ಮುರುಘಾಮಠದ ವಿರುದ್ಧ ಷಡ್ಯಂತ್ರ ನಡೆಸುವವರ ವಿರುದ್ಧ ಕಾನೂನು ಕ್ರಮ ಆಗಬೇಕು. ಶ್ರೀಮಠಕ್ಕೆ ಕೆಟ್ಟ ಹೆಸರು ತರುವ ವಿಲಕ್ಷಣಕ್ಕೆ ಕಡಿವಾಣ ಬೀಳಬೇಕು. ಅದಕ್ಕಾಗಿ ಪ್ರಕರಣದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.