ಜಿಲ್ಲಾ ಪೊಲೀಸರು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ದಾಖಲಾದ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಕೋಟ್ಯಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಿದರು.
ಜಿಲ್ಲಾ ವ್ಯಾಪ್ತಿಯ ಠಾಣೆಗಳಲ್ಲಿ 2023ರ ಜುಲೈನಿಂದ 2025ರ ಜನವರಿವರೆಗೆ ದಾಖಲಾದ 134 ಪ್ರಕರಣಗಳಲ್ಲಿ ಪತ್ತೆಹಚ್ಚಿರುವ 2.06 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಗುರುವಾರ ಡಿಎಆರ್ ಕೇಂದ್ರ ಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ವಾರಸುದಾರರಿಗೆ ಹಸ್ತಾಂತರಿಸಿದರು.
ಎರಡು ಲಾಭಕ್ಕಾಗಿ ಕೊಲೆ ಪ್ರಕರಣ, 3 ದರೋಡೆ, 19 ಸುಲಿಗೆ, 10 ಸರಗಳ್ಳತನ, 67 ವಾಹನ ಕಳ್ಳತನ, 63 ಮನೆಕಳ್ಳತನ, 8 ವಂಚನೆ, 11 ಜಾನುವಾರು ಕಳ್ಳತನ, 33 ಇತರ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸ್ವತ್ತುಗಳನ್ನು ಹಿಂದಿರುಗಿಸಲಾಯಿತು. ತಮ್ಮ ವಸ್ತುಗಳನ್ನು ಪಡೆದುಕೊಂಡ ವಾರಸುದಾರರು ಸಂತಸದಿಂದ ಮನೆಗೆ ತೆರಳಿದರು.
2.43 ಕೆಜಿ ಚಿನ್ನ, 4.36 ಕೆಜಿ ಬೆಳ್ಳಿ, 42,36,585 ರೂ. ನಗದು, 52.12 ಲಕ್ಷ ರೂ. ಮೌಲ್ಯದ 62 ಬೈಕ್, 5 ಕಾರು, 3 ರಿಕ್ಷಾ, 2 ಟ್ರಾಕ್ಟರ್, 3 ಟಿಪ್ಪರ್, 3 ರೋಡ್ ರೋಲರ್ ಹಿಂದಿರುಗಿಸಲಾಯಿತು. 3.54 ಲಕ್ಷ ರೂ. ಮೌಲ್ಯದ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕ್ ವಸ್ತು, 6 ಹಸು, 3 ಕುರಿ, ದೇವರ ವಿಗ್ರಹ, 3.50 ಲಕ್ಷ ರೂ. ಮೌಲ್ಯದ 90 ಫೋನ್‌ಗಳನ್ನು ವಾರಸುದಾರರಿಗೆ ನೀಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಮಾತನಾಡಿ, 135 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ವಾರಸುದಾರರಿಗೆ ನೀಡಿದ್ದೇವೆ. ಇನ್ನಷ್ಟು ಹಣ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಬಾಕಿ ಇದ್ದು, ಅವನ್ನೂ ಮುಂದಿನ ದಿನಗಳಲ್ಲಿ ಹಿಂತಿರುಗಿಸಲಾಗುವುದು. ಕೃತಕ ಬುದ್ಧಿಮತ್ತೆ (ಎಐ) ಕ್ಯಾಮರಾ ಮೂಲಕ ದಾಖಲಾದ ಪ್ರಕರಣಗಳಲ್ಲಿ ಗೊಂದಲವಿದ್ದರೆ ಎಸ್‌ಪಿ ಕಚೇರಿ ಸಂಪರ್ಕಿಸಿ ಎಂದರು. ಎಎಸ್‌ಪಿಗಳಾದ ನಾಗೇಶ್, ಮಲ್ಲಿಕ್ ಇದ್ದರು.