ನ್ಯೂಸ್

ಕಳಪೆ ಕಾಮಗಾರಿಯಿಂದ ಕುಸಿದ ಕೋಟೆ:  ಜಿಲ್ಲಾ ನಿರ್ಮಿತಿ ಕೇಂದ್ರ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

ಬಾಗೇಪಲ್ಲಿ : ತಾಲೂಕಿನ ಗುಮ್ಮನಾಯಕನಪಾಳ್ಯದ ಕೋಟೆಗೆ ಕಳೆದ ಆರು ತಿಂಗಳ ಹಿಂದೆಯಷ್ಷೇ ಮಾಡಲಾದ ಕಾಮಗಾರಿ ಕಳಪೆಯಾಗಿದ್ದು, ಕೋಟೆಯ ಒಂದು ಭಾಗ ಕುಸಿದಿದೆ. ಕಳಪೆ ಕಾಮಗಾರಿ ನಿರ್ವಹಣೆ ಮಾಡಿರುವ ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕೋಟೆಯ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

15 ವರ್ಷಗಳ ಹಿಂದೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಗುಮ್ಮನಾಯಕನ ಪಾಳ್ಯದ ಕೋಟೆ, ಸುತ್ತಮುತ್ತಲಿನ ಪವಿತ್ರ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ, ಪಾರ್ಕ್ ಮತ್ತು ದೋಣಿ ವಿಹಾರ ಕೇಂದ್ರ ಸ್ಥಾಪಿಸಿ ಪ್ರವಾಸಿ ತಾಣದ ಮೆರುಗು ತಂದಿದ್ದರು. ನಂತರ ಚುನಾಯಿತಗೊಂಡ ಜನಪ್ರತಿನಿಧಿಗಳು ಕೋಟೆ ಅಭಿವೃದ್ಧಿಗೆ ಸಹಕರಿಸದ ಕಾರಣ ಅಭಿವೃದ್ಧಿ ಮೂಲೆ ಗುಂಪಾಯಿತು. 2018 ಡಿ 18 ರಂದು ಅಂದಿನ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಪ್ರವಾಸಿ ತಾಣ ಗುಮ್ಮನಾಯಕಪಾಳ್ಯಕ್ಕೆ ನಿರೀಕ್ಷೀತ ಭೇಟಿ ನೀಡಿ ಪರಿಶೀಲಿಸಿ, ಗುಮ್ಮನಾಯಕನಪಾಳ್ಯ ಕೋಟೆ ಅಭಿವೃದ್ಧಿಯ ಬಗ್ಗೆ ರೂಪುರೇಷೆಗಳನ್ನು ಸಿದ್ದಪಡಿಸಿ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿಗೊಳಿಸುವಂತೆ ಆದೇಶ ಮಾಡಿದರು. ಕೋಟೆಯ ಅಭಿವೃದ್ಧಿಗಾಗಿ ಸುಮಾರು 50 ಲಕ್ಷ ರೂಗಳ ಕ್ರೀಯಾ ಯೋಜನೆ ಪಟ್ಟಿ ಸಿದ್ದಪಡಿಸಿ ಅನುದಾನ ಬಿಡುಗಡೆ ಮಾಡಿದ್ದರು.

2019 ಜೂನ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕಾಮಗಾರಿಯನ್ನು ಕೈಗೆ ಎತ್ತಿಕೊಂಡು ಪ್ರವೇಶ ದ್ವಾರ ಮತ್ತು ಕೋಟೆಯ ದುರಸ್ಥಿಯ ಕಾಮಗಾರಿ ನಡೆಸಲಾಯಿತು, ದವಾಖಾನೆ ಮತ್ತು ಸ್ಮಾರಕಗಳ ದುರಸ್ಥಿ ಕಾಮಗಾರಿಗೆ ಮುಂದಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ವರ್ಗಾವಣೆಗೊಂಡರು.

ಜಿಲ್ಲಾಧಿಕಾರಿ ವರ್ಗಾವಣೆಗೊಂಡ ನಂತರ ವಿವಿಧ ಕಾರಣಗಳಿಂದ ಕೋಟೆಯ ಅಭಿವೃದ್ಧಿ ಹಾಗೂ ದುರಸ್ಥಿ ಕಾಮಗಾರಿಗಳು ಸಂಪೂರ್ಣವಾಗಿ ನಿಂತುಹೋಯಿತು. 2020 ಅಕ್ಟೋಬರ್‌ನಲ್ಲಿ ಕಾಮಗಾರಿಗಳಿಗೆ ಮರು ಚಾಲನೆ ನೀಡಿ ಕೋಟೆಗೆ ಬೃಹತ್ ಗಾತ್ರದ ಕಲ್ಲುಗಳನ್ನು ಜೋಡುಸುವುದು ಸೇರಿ ವಿವಿಧ ಕಾಮಗಾರಿಗಳನ್ನು ಮಾಡಿ, ಕೋಟೆಯ ಮುಂದೆ ನೂತನವಾಗಿ ಕೊಠಡಿಗಳನ್ನು ನಿರ್ಮಿಸಲಾಯಿತು. ಆದರೆ ಇಷ್ಷರಲ್ಲೇ ಕಾಮಗಾರಿ ನಡೆದ ಕೆಲವೆ ತಿಂಗಳ ಅಂತರದಲ್ಲಿ ಕೋಟೆಯ ಒಂದು ಭಾಗ ಉರುಳಿಬಿದ್ದಿರುವುದು ಇತಿಹಾಸ ಪ್ರಿಯರ ಮನಸ್ಸಿಗೆ ನೋವುನ್ನುಂಟು ಮಾಡಿದೆ.

ನಿಧಿ ಕಳ್ಳರ ಕಾಟ :  ಐತಿಹಾಸಿಕ ಹಿನ್ನಲೆಯುಳ್ಳ ಕೋಟೆ ಪ್ರಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಜರ ಆಳ್ವಿಕೆಯ ಅರಮನೆ, ಪುರಾತನ ಕಾಲದ ದೇವಾಲಯಗಳು ಇರುವ ಕಾರಣ ನಿಧಿ ಕಳ್ಳರ ಕಾಟ ಹೆಚ್ಚಾಗಿದ್ದು, ನಿಧಿ ಕಳ್ಳರ ಕಾಟದಿಂದ ರಾಜರ ಮೂಲ ಪೀಟಕ್ಕೆ ದಕ್ಕೆಯಾಗಲಿದ್ದು ನಿಧಿ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ.

ಐತಿಹಾಸಿಕ ಮಹತ್ವವುಳ್ಳ ಕೋಟೆಯ ಕಾಮಗಾರಿಯನ್ನು ಜಿಲ್ಲಾಡಳಿತ ಪುನಃ ಕೈಗೆತ್ತಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಿ ಚಿತ್ರದುರ್ಗದಂತೆ ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಬೇಕಾಗಿದೆ. ಬಿ.ಆರ್.ಕೃಷ್ಣ, ಇತಿಹಾಸ ಸಂಶೋಧಕರು ಬಾಗೇಪಲ್ಲಿ. ಕೋಟೆಯ ಪ್ರಾಂಗಣದಲ್ಲಿ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿಗೆ ಮುಂದಾಗಿದ್ದು ಕೋಟೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಅಭಿವೃದ್ಧಿ ಹೆಸರಿನಲ್ಲಿ ಐತಿಹಾಸಿಕ ಕೋಟೆಯ ಇತಿಹಾಸವನ್ನು ಬುಡಮೇಲು ಮಾಡಲು ಹೊರಟಿರುವ ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ. ಎಂ.ಹರೀಶ್. ಸದಸ್ಯರು. ತೊಳ್ಳಪಲ್ಲಿ ಗ್ರಾ.ಪಂ.