ನ್ಯೂಸ್

ಕಳಪೆ ಕಸದ ಡಬ್ಬಿ ವಿರುದ್ಧ ದೂರು

ನಂಜನಗೂಡು: ನಗರದ ಮನೆ-ಮನೆಗೆ ವಿತರಿಸಲಾಗಿರುವ ಕಸದ ಡಬ್ಬಿಗಳು ಕಳಪೆಯಾಗಿವೆ ಎಂಬ ಕೂಗು ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.


ಮಂಗಳವಾರ ಆಯೋಜನೆಗೊಂಡಿದ್ದ ಸಭೆಯಲ್ಲಿ ಗಾಯತ್ರಿ ಮೋಹನ್, ಖಾಲೀದ್ ಅಹಮ್ಮದ್ ಮತ್ತಿತರರು ಮಾತನಾಡಿ, 27 ಲಕ್ಷ ರೂ. ವೆಚ್ಚಮಾಡಿ ಕಸದ ಡಬ್ಬಿಗಳನ್ನು ನೀಡಲಾಗಿದೆ. ಆದರೆ ಅವು ಗುಣಮಟ್ಟ ಹೊಂದಿಲ್ಲ ಎಂದು ದೂರಿದರು.


ಹಳೇ ಟೌನ್‌ನ 10 ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲ. ಇದರಿಂದ ಜನರು ಪರಿತಪಿಸುತ್ತಿದ್ದಾರೆ. ನಿರಂತರ ನೀರು ಸರಬರಾಜು ಯೋಜನೆಯ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಇವುಗಳಿಗೆ ಶೀಘ್ರ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.


ಖಾತೆ ಮಾಡಿಸಿಕೊಳ್ಳಲು ಪರದಾಟ: ಕಪಿಲೇಶ್ ಮಾತನಾಡಿ, ನಮ್ಮ ವಾರ್ಡ್ ನಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿ 6 ತಿಂಗಳು ಕಳೆದರೂ ಕಾಲಮಿತಿಯಲ್ಲಿ ಪೂರ್ಣಗೊಂಡಿಲ್ಲ. ನಗರಸಭೆಯಲ್ಲಿ ಸಾರ್ವಜನಿಕರು ಖಾತೆ ಮಾಡಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಇದೆ. ದಾಖಲೆಗಳು ಸಮರ್ಪಕವಾಗಿದ್ದರೂ ಅಧಿಕಾರಿಗಳು ಸಲ್ಲದ ಸಬೂಬು ಹೇಳಿ ಜನರನ್ನು ಅಲೆಯುವಂತೆ ಮಾಡುತ್ತಿದ್ದಾರೆ. 45 ದಿನಗಳ ಒಳಗೆ ಖಾತೆ ಮಾಡಿಕೊಡಬೇಕು ಎಂಬ ನಿಯಮವಿದ್ದರೂ, ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.


ಕಾಮಗಾರಿ ಪೂರ್ಣಗೊಂಡಿಲ್ಲ: ಮೀನಾಕ್ಷಿ ಮಾತನಾಡಿ, ನಗರದ ಕೆ.ಎಚ್.ಬಿ. ಕಾಲನಿಯಿಂದ ಊಟಿ ರಸ್ತೆಗೆ ಸಂಪರ್ಕ ಕಲ್ಪಿಸುವ ಹನುಮಂತಪ್ಪ ಮಿಲ್ ಬಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಮಿಪೂಜೆ ನಡೆಸಿ 6 ತಿಂಗಳಾಗಿದೆ. ಆದರೆ ಕೆಲಸ ಇನ್ನೂ ಆರಂಭಗೊಂಡಿಲ್ಲ ಎಂದು ದೂರಿದರು.


ಬೀದಿ ದೀಪ ಕೆಟ್ಟಿವೆ: ಗಂಗಾಧರ, ಮಹೇಶ್, ಮಂಗಳಮ್ಮ ಮಾತನಾಡಿ, ವಾರ್ಡ್‌ಗಳಲ್ಲಿ ಬೀದಿ ದೀಪಗಳು ಕೆಟ್ಟು ನಿಂತಿವೆ. ಕಳೆದ 6 ತಿಂಗಳಿನಿಂದ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿ ಸಾಕಾಗಿದೆ. ರಸ್ತೆ ಹಾಗೂ ಚರಂಡಿ ನಿರ್ಮಾಣದ ಗುತ್ತಿಗೆ ಅವಧಿ ಮುಗಿಯುತ್ತಿದ್ದರೂ ಕಾಮಗಾರಿ ಆರಂಭಿಸಿಲ್ಲ. ಆದ್ದರಿಂದ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಮತ್ತೆ ಕಾಮಗಾರಿ ನಿರ್ವಹಣೆಗಾಗಿ ಟೆಂಡರ್ ಕರೆಯಿರಿ ಎಂದು ಒತ್ತಾಯಿಸಿದರು.
ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ಸದಸ್ಯರಾದ ಮಹದೇವ ಪ್ರಸಾದ್, ದೇವ, ಯೋಗೇಶ್, ಗಿರೀಶ್ ಕುಮಾರ್, ನಂದಿನಿ, ರೆಹನಾ ಬಾನು, ಶ್ವೇತ ಲಕ್ಷ್ಮಿ, ಪ್ರದೀಪ್ ಇತರರು ಇದ್ದರು.

ಪತ್ರ ಬರೆಯುತ್ತೇನೆ
ನಗರದ ಹಳ್ಳದಕೇರಿ, ತೋಪಿನ ಬೀದಿ, ಕುರಬಗೇರಿ ಸೇರಿದಂತೆ 7 ವಾರ್ಡ್ ನಿವಾಸಿಗಳಿಗೆ ತ್ವರಿತವಾಗಿ ಸರ್ಕಾರದ ಸವಲತ್ತುಗಳನ್ನು ನೀಡುವಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ಪತ್ರ ಬರೆಯಲಾಗುವುದು ಎಂದು ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ ತಿಳಿಸಿದರು.
ಆಯುಕ್ತ ರಾಜಣ್ಣ ಮಾತನಾಡಿ, ಸಮಸ್ಯೆಗಳು ಗಮನಕ್ಕೆ ಬಂದಿವೆ. ಅವುಗಳ ಬಗ್ಗೆ ಕ್ರಮವಹಿಸಲಾಗುವುದು. ಬುಧವಾರದಿಂದಲೇ ಹಳೇ ಟೌನ್ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿ, ನಲ್ಲಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ತಿಳಿಸಲಾಗುವುದು ಎಂದು ಹೇಳಿದರು.