ಯಲ್ಲಾಪುರ: ತಾಲೂಕಿನ ಕಳಚೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶೂನ್ಯ ದಾಖಲೆ ಹೊಂದಿದ ಹಿನ್ನೆಲೆಯಲ್ಲಿ ಹುಣಶೆಟ್ಟಿಕೊಪ್ಪಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶಿಸಿದೆ.
ಕಳಚೆ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಬಾರಿ ಯಾವ ವಿದ್ಯಾರ್ಥಿಗಳೂ ದಾಖಲಾತಿ ಮಾಡಿರಲಿಲ್ಲ. ಇದ್ದ ಕೆಲವೇ ವಿದ್ಯಾರ್ಥಿಗಳು ಬೇರೆ ಬೇರೆ ಪ್ರೌಢಶಾಲೆಗಳಿಗೆ ಸೇರಿಕೊಂಡ ಹಿನ್ನೆಲೆಯಲ್ಲಿ ಕಳಚೆ ಪ್ರೌಢಶಾಲೆಯನ್ನು ಮುಚ್ಚಲು ಇಲಾಖೆ ಮುಂದಾಗಿತ್ತು.
ಶಾಲೆ ಮುಚ್ಚುವುದನ್ನು ತಡೆಯಲು ಮುಂದಾದ ಶಾಸಕ ಶಿವರಾಮ ಹೆಬ್ಬಾರ ಕಳಚೆ ಶಾಲೆಯನ್ನು ಮುಚ್ಚದೆ, ಪ್ರೌಢಶಾಲೆ ಇಲ್ಲದ ಮದನೂರು ಗ್ರಾಪಂ ವ್ಯಾಪ್ತಿಯ ಹುಣಶೆಟ್ಟಿಕೊಪ್ಪಕ್ಕೆ ಸ್ಥಳಾಂತರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಸ್ಥಳಾಂತರಕ್ಕೆ ಸರ್ಕಾರ ಆದೇಶಿಸಿದೆ.
ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ಹುಣಶೆಟ್ಟಿಕೊಪ್ಪದಲ್ಲಿ ಯಾವುದೇ ಪ್ರೌಢಶಾಲೆ ಇಲ್ಲದೆ ವಿದ್ಯಾರ್ಥಿಗಳು ಪ್ರೌಢಶಿಕ್ಷಣಕ್ಕಾಗಿ ಯಲ್ಲಾಪುರಕ್ಕೆ ಬರಬೇಕಾದ ಸ್ಥಿತಿ ಇತ್ತು. ಇದೀಗ ಪ್ರೌಢಶಾಲೆ ಮಂಜೂರಿಯಾದ ಹಿನ್ನೆಲೆಯಲ್ಲಿ ಕರಡೊಳ್ಳಿ, ಕಳಸೂರು, ಹುಲಗೋಡ, ಬಸಳೆಬೈಲ್ ಹಾಗೂ ಖಂಡ್ರಾನಕೊಪ್ಪ ಸೇರಿದಂತೆ ಹಲವಾರು ಭಾಗದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣವನ್ನು ಪಡೆಯುವುದಕ್ಕೆ ಅನೂಕೂಲವಾಗಲಿದೆ.
ಹುಣಶೆಟ್ಟಿಕೊಪ್ಪದಲ್ಲಿ ಪ್ರೌಢಶಾಲೆಯನ್ನು ಮಂಜೂರಿಗೊಳಿಸುವ ದೂರದೃಷ್ಟಿಯಿಂದ ಶಿವರಾಮ ಹೆಬ್ಬಾರ ಅವರು ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಇಂಡೋ - ಮಿಮ್ ಕಂಪನಿಯ ಸಿಎಸ್ಆರ್ ಅಡಿಯಲ್ಲಿ 4 ತರಗತಿಯ ಕೊಠಡಿಯನ್ನು ಮಂಜೂರಿಗೊಳಿಸಿದ್ದರು. ಕೊಠಡಿಯ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದೀಗ ನೂತನ ಕೊಠಡಿಯಲ್ಲಿಯೇ ತರಗತಿ ಆರಂಭವಾಗಲಿದೆ.
ಕಳಚೆ ಸರ್ಕಾರಿ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪಕ್ಕೆ ಸ್ಥಳಾಂತರಿಸಿ ಸರ್ಕಾರದ ಆದೇಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಆರಂಭವಾಗಿದೆ. ತಮ್ಮ ಮನವಿಯಂತೆ ಸರ್ಕಾರ ಸ್ಥಳಾಂತರದ ಆದೇಶ ನೀಡಿದೆ ಎಂದು ಶಾಸಕ ಹೆಬ್ಬಾರ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ವಿ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕರ, ಶಾಸಕ ಭೀಮಣ್ಣ ನಾಯ್ಕ ಅವರ ಪ್ರಯತ್ನದಿಂದ ಶಾಲೆ ಸ್ಥಳಾಂತರಕ್ಕೆ ಸರ್ಕಾರ ಆದೇಶಿಸಿದೆ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ರವಿ ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಶಾಲೆಯನ್ನು ಮುಚ್ಚುವುದು ಸುಲಭ, ಮತ್ತೆ ತೆರೆಯುವುದು ಕಷ್ಟ. ಹಾಗಾಗಿ ಸರ್ಕಾರಿ ಶಾಲೆಯನ್ನು ಮುಚ್ಚದೆ, ಅಗತ್ಯವಿರುವೆಡೆ ಸ್ಥಳಾಂತರಿಸುವ ಕಾರ್ಯ ಮಾಡಲಾಗಿದೆ. ಹುಣಶೆಟ್ಟಿಕೊಪ್ಪ ಭಾಗದ ವಿದ್ಯಾರ್ಥಿಗಳಿಗೆ ಊರಿನಲ್ಲೇ ಗುಣಮಟ್ಟದ ಶಿಕ್ಷಣ ಲಭಿಸುವಂತಾಗಿದೆ. | ಶಿವರಾಮ ಹೆಬ್ಬಾರ, ಶಾಸಕ