ಸಾಗರ : ನಮ್ಮ ದೇಶದ ಪ್ರಸಿದ್ಧ ದೇವಾಲಯಗಳು ಕಲ್ಲಿನ ಕೆತ್ತನೆಯ ಸುಂದರ ಕಲಾಕೃತಿಗಳ ಮೇಲೆ ನಿಂತಿದೆ. ಅವುಗಳನ್ನು ಪುನರ್‌ಸ್ಥಾಯಿಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ಕರಕುಶಲ ಅಭಿವೃದ್ಧಿ ನಿಗಮದ ರಾಜ್ಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಶ್ವನಾಥ್ ಹೇಳಿದರು.\
ಶ್ರೀಗಂಧ ಸಂಕೀರ್ಣದಲ್ಲಿ ಬುಧವಾರ ಶಿಲ್ಪ ಗುರುಕುಲದಲ್ಲಿ ಕಲ್ಲು ಹಾಗೂ ಮರದ ಕೆತ್ತನೆ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗುರುಕುಲದಲ್ಲಿ ಕಲ್ಲು ಕೆತ್ತನೆ ಮತ್ತು ಮರ ಕೆತ್ತನೆ ಕಲಿತವರು ಶ್ರೇಷ್ಠ ಕಲಾಕೃತಿಗಳನ್ನು ರಚಿಸುವ ಮೂಲಕ ಕಲಾ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ಹತ್ತು ತಿಂಗಳ ಕಾಲ ಗುರುಗಳು ತಮಗೆ ಎಲ್ಲ ರೀತಿಯಲ್ಲೂ ಕೆತ್ತನೆ ಕೆಲಸವನ್ನು ಕಲಿಸಿದ್ದಾರೆ. ಮುಂದೆ ವೃತ್ತಿಯನ್ನು ನಡೆಸುವವರಿಗೆ ಎಲ್ಲ ರೀತಿಯ ಸಹಕಾರ ನಿಗಮ ನೀಡಲಿದೆ. ಕಲಿತ ವಿದ್ಯೆಯನ್ನು ಕೆತ್ತನೆಕಾರರು ಮುಂದುವರಿಸಿಕೊಂಡು ಹೋಗಬೇಕು ಎಂದರು.
ನಿಗಮದ ವ್ಯವಸ್ಥಾಪಕ ನಾಗೇಂದ್ರ ಮಾತನಾಡಿ, ಸಂಸ್ಥೆಯಿಂದ ತರಬೇತಿ ಪಡೆದ ಶಿಕ್ಷಣಾರ್ಥಿಗಳಿಗೆ ಎಲ್ಲ ರೀತಿಯ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ತರಬೇತಿ ಪಡೆದವರು ಕೆಲಸವನ್ನು ಕ್ರಿಯಾಶೀಲವಾಗಿ ಮುಂದುವರಿಸಬೇಕು. ನೀವು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸುವತ್ತ ಗಮನಹರಿಸಿ, ಕರಕುಶಲ ಅಭಿವೃದ್ಧಿ ನಿಗಮ ಕಲಾವಿದರಿಗೆ ವಿಶೇಷ ಸಹಕಾರವನ್ನು ನೀಡುತ್ತಿದೆ. ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವಲ್ಲಿ ಕೆತ್ತನೆಕಾರರು ಮುಂದಾಗಬೇಕು ಎಂದರು.
ನಿಗಮದ ಅಧಿಕಾರಿ ಮಂಡಲ್, ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಪರಶುರಾಮ್, ಯೋಜನಾಧಿಕಾರಿ ಗಣೇಶ್ ಸಿಂಗ್ ಇತರಿದ್ದರು.