ಹುಣಸೂರು ತಾಲೂಕಿನ ಕಲ್ಕಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯಶಿಕ್ಷಕ ತ್ಯಾಗರಾಜ್ ಇದ್ದರು. 
ನ್ಯೂಸ್

ಕಲ್ಕಡ ಸರ್ಕಾರಿ ಶಾಲೆಗೆ ಬಿಇಒ ಭೇಟಿ


*ಎರಡು ಹೊಸ ಕೊಠಡಿ ನಿರ್ಮಿಸಿ ಕೊಡುವ ಭರವಸೆ


ಹುಣಸೂರು: ತಾಲೂಕಿನ ಕಲ್ಕಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಶುಕ್ರವಾರ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲಿಸಿದರಲ್ಲದೆ, ಶೀಘ್ರ ಎರಡು ಹೊಸದಾಗಿ ಕೊಠಡಿಗಳನ್ನು ನಿರ್ಮಿಸಲು ಕ್ರಮ ವಹಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.


ಸೆ.23ರಂದು ವಿಜಯವಾಣಿಯಲ್ಲಿ ‘ಕನ್ನಡ ಶಾಲೆ ಮುಚ್ಚುವ ಹುನ್ನಾರ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಇಒ ರೇವಣ್ಣ, ಕರಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಶಾಲೆಯ ಕಟ್ಟಡ ದುಸ್ಥಿತಿಯಲ್ಲಿರುವುದು ನಿಜ. ಕಟ್ಟಡವನ್ನು ದುರಸ್ತಿ ಮಾಡಬಹುದೆ ಅಥವಾ ನೆಲಸಮಕ್ಕೆ ಯೋಗ್ಯವೇ ಎನ್ನುವುದರ ಕುರಿತು ವರದಿ ನೀಡಲು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಕಟ್ಟಡ ಯೋಗ್ಯವಲ್ಲದ ಎಂದು ವರದಿ ನೀಡಿದಲ್ಲಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಡಿ 2 ಲಕ್ಷ ರೂ.ವೆಚ್ಚದಡಿ ಎರಡು ಕೊಠಡಿಗಳನ್ನು ಶೀಘ್ರ ನಿರ್ಮಿಸಿ ಕೊಡಲಾಗುವುದು. ಜತೆಗೆ ಕಟ್ಟಡವನ್ನೂ ನೆಲಸಮಗೊಳಿಸಲಾಗುವುದು. ದಾಸೋಹ ಕೊಠಡಿ ಕೂಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಗ್ರಾ.ಪಂ.ವತಿಯಿಂದ ದಾಸೋಹ ಕೊಠಡಿ ಮತ್ತು ಶೌಚಗೃಹ ನಿರ್ಮಿಸಿಕೊಡಲು ಕೋರಲಾಗುವುದು ಎಂದು ತಿಳಿಸಿದರು.


ಶಿಕ್ಷಕ ತ್ಯಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಚಲುವಾಚಾರಿ ಹಾಜರಿದ್ದರು.