ಚಿತ್ರಗಳ ಮೂಲಕ ಸಾಮಾಜಿಕ ಸಂದೇಶವನ್ನು ಕೊಡುವಂತಹ ಕೆಲಸ ಕಲೆಯಿಂದ ಮಾತ್ರ ಸಾಧ್ಯ ಎಂಬುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಕಲೆಗೆ ಬೆಲೆ ಕಟ್ಟಲು ಯಾವ ಕಾಲಕ್ಕೂ ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.
ಮೈಸೂರು ದಸರಾ ಮಹೋತ್ಸವ ಲಲಿತಾ ಮತ್ತು ಕರಕುಶಲ ಕಲೆ ಉಪಸಮಿತಿಯ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ (ಕಾವಾ) ಸೋಮವಾರ ಆಯೋಜಿಸಿದ್ದ ತೊಗಲು ಗೊಂಬೆ ಬಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕಾವಾ ಎಂಬುದು ವಿಶಿಷ್ಟವಾದ ವಿಶೇಷ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಹೆಸರು ಮಾಡಿದಂತಹ ಒಂದು ಉತ್ತಮ ಸಂಸ್ಥೆ ಎಂದು ಹೇಳಿದರೆ ತಪ್ಪಾಗಲಾರದು. ಕಾವಾ ಕಾಲೇಜು ರಾಜರ ಪ್ರಥಮ ದರ್ಜೆಯ ಕಾಲೇಜು ಎಂದೇ ಪ್ರಸಿದ್ಧಿ ಪಡೆದಿದ್ದು, ವಿದ್ಯಾರ್ಥಿಯ ಜೊತೆಗೆ ಕೌಶಲ್ಯ ಸಂವರ್ಧನೆ ಮಾಡಿ, ದೃಶ್ಯ ಕಲೆಯನ್ನು ಅಭಿವೃದ್ಧಿಪಡಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕಲೆಯನ್ನು ವಿನ್ಯಾಸ ಮಾಡುವಂತಹ ಫ್ಯಾಕ್ಟರಿ ಇದು. ಮೈಸೂರು ವಿಶ್ವವಿದ್ಯಾಲಯದಿಂದ ಶಾಶ್ವತ ಯೋಜನೆಯನ್ನು ಪಡೆದಂತಹ ಸಂಸ್ಥೆಯಾಗಿದೆ ಎಂದರು.
ಈ ಕಾಲೇಜಿನಲ್ಲಿ ಕಲಿತಂತಹ ವ್ಯಕ್ತಿಗಳು ವಿವಿಧ ಕ್ಷೇತ್ರಗಳಲ್ಲಿ ವಿನ್ಯಾಸಕಾರಾಗಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ 59 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಬರಿ 16 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಅವುಗಳನ್ನು ಮುಂದಿನ ದಿನಮಾನಗಳಲ್ಲಿ ಭರ್ತಿ ಮಾಡುವಂತಹ ಕೆಲಸ ಮಾಡುತ್ತೇನೆ. ಈ ಸಂಸ್ಥೆ ಬೆಳೆಸುವಲ್ಲಿ ನಾನು ಕೆಲಸ ಮಾಡುತ್ತೇನೆ. ಈ ಸಂಸ್ಥೆಯಲ್ಲಿ ಒಂದು ಕಲಾ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗುವುದು. ರಾಜರ ಒಂದು ದೊಡ್ಡ ಸಂಸ್ಥೆ ಎಂದರೆ ಕಾವಾ. ಈ ಸಂಸ್ಥೆಯನ್ನು ಕಟ್ಟುವುದಕ್ಕೆ ನನ್ನಿಂದ ಏನೇನು ಸಾಧ್ಯತೆ ಇದೆ ಅದನ್ನು ನಾನು ಮಾಡುತ್ತೇನೆ ಎಂದರು.
ನಮ್ಮ ರಾಜ್ಯದಲ್ಲಿ ಕಲೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಕಲೆಯನ್ನು ತೋರಿಸಿ ಬೋರ್ಡ್ ಗೆ ಹಾಕಿದರೆ ಸಾಲದು, ಅವುಗಳ ಸಂದೇಶವನ್ನು ತಲುಪಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ನಿಜಕ್ಕೂ ಒಂದು ಉತ್ತಮವಾದಂತಹ ಕೆಲಸವಾಗಿದೆ. ಕೈ ಇಂದ ಮಾಡಿದಂತಹ ಕಲೆ ಎಲ್ಲ ಕಾಲಕ್ಕೂ ಪ್ರಸ್ತುತ ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಕಾವಾ ಸಂಸ್ಥೆಯು ತನ್ನದೇ ಆದ ಕಲೆ ಹೊಂದಿದೆ. ಈ ಸಂಸ್ಥೆಯನ್ನು ನಾವು ವಿಶ್ವವಿದ್ಯಾಲಯ ಮಟ್ಟಕ್ಕೆ ತಲುಪುವಂತೆ ಮಾಡಬೇಕು.ಬೇರೆ ತಂತ್ರಜ್ಞಾನ ಬಂದು ಕಲೆ ನಶಿಸಿಹೋಗುತ್ತಿದೆ. ಕೈಯಿಂದ ಶ್ರಮ ಹಾಕಿ ಮಾಡುವಂತಹ ಕೆಲಸಕ್ಕೆ ನಾವು ಗೌರವವನ್ನು ಕೊಡಬೇಕು. ಕಲೆಗೆ ಹೆಚ್ಚಿನ ಜೀವ ತುಂಬುವ ಕೆಲಸಕ್ಕೆ ನಾವೆಲ್ಲರೂ ಸಹಕರಿಸಲು ಮುಂದಾಗಬೇಕು ಎಂದು ಹೇಳಿದರು.
ಸರ್ಕಾರದ ಕಾರ್ಯದರ್ಶಿ ಡಾ.ಎಂ.ವಿ.ವೆಂಕಟೇಶ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಎಂ.ಸಿ. ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ, ಉಪ ಸಮಿತಿಯ ಉಪ ವಿಶೇಷಾಧಿಕಾರಿ ದೇವರಾಜ್ ಸೇರಿ ಇತರರಿದ್ದರು.