ಬೆಳಗಾವಿ: ತಾಲೂಕಿನ ಮಾಸ್ತಮರಡಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಲಿಕಾ ಹಬ್ಬದ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಕರೊನಾ ಅವಧಿಯಲ್ಲಿನ ಕಲಿಕಾ ನಷ್ಟ ಸರಿದೂಗಿಸುವುದಕ್ಕಾಗಿ ಹಾಗೂ ಮಕ್ಕಳ ಸೃಜನಶೀಲತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಾರಿ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಯಿತು.
ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಕ್ಲಸ್ಟರ್‌ಗಳ ಸಾವಿರಾರು ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರು, ರೈತರು, ಮಹಾತ್ಮರ ವೇಷ ಧರಿಸಿ ಗಮನ ಸೆಳೆದರು. ಚಕ್ಕಡಿಗಳನ್ನು ತಳಿರು-ತೋರಣ, ಬಲೂನ್‌ಗಳಿಂದ ಸಿಂಗರಿಸಲಾಗಿತ್ತು. ಸರಸ್ವತಿ ದೇವಿ, ಬಸವೇಶ್ವರ ವೇಷಧಾರಿಗಳನ್ನು ಚಕ್ಕಡಿಗಳಲ್ಲಿ ಕೂಡ್ರಿಸಿ ಸಂಭ್ರಮಿಸಿದರು.
ಮುತ್ತೈದೆಯರ ಪೂರ್ಣಕುಂಭ ಮೇಳ, ಕರಡಿ ಮಜಲು, ವಾರ್ಕರಿ ತಂಡ, ಡೊಳ್ಳು ಕುಣಿತ, ಲೇಜಿಮ್, ನಂದಿಕೋಲು, ಹಳಿಬಂಡಿ, ಚಕ್ಕಡಿ, ಕೋಲಾಟ, ಚೌಡಕಿ ಪದ ಹಾಗೂ ಸಂಗ್ರಾಮ ಪದಗಳ ಗಾಯನ ಸೇರಿ ಕನ್ನಡ ನಾಡು ನುಡಿಯ ವೈವಿಧ್ಯ ಸಾರುವ ಹತ್ತಾರು ರೂಪಕಗಳನ್ನು ಪ್ರಸ್ತುತಪಡಿಸಿದರು. ಜತೆಗೆ ಶಿಕ್ಷಣ ಇಲಾಖೆಯ ಪ್ರಮುಖ ಯೋಜನೆಗಳ ಜಾಗೃತಿ ಫಲಕಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಶಿಕ್ಷಕರು, ಶಿಕ್ಷಕಿಯರೂ ಕುಣಿದು ಸಂಭ್ರಮಿಸಿದರು. ಮೆರವಣಿಗೆ ನಂತರ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ರಶ್ಮಿ ಸುತಗಟ್ಟಿ, ಡಿಡಿಪಿಐ ಬಸವರಾಜ ನಾಲತವಾಡ, ಡಯಟ್ ಪ್ರಾಚಾರ್ಯ ಎಸ್.ಡಿ. ಗಾಂಜಿ, ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ, ಎಸ್.ಪಿ. ದಾಸಪ್ಪನವರ, ಬಸವರಾಜ ಮಿಲ್ಲಾನಟ್ಟಿ, ವಿಷಯ ಪರಿವೀಕ್ಷಕರಾದ ಶ್ರೀದೇವಿ ನಾಗನೂರ, ಮೃಣಾಲಿನಿ ಪಾಟೀಲ, ರಾಮು ಗುಗವಾಡ, ಎಸ್.ಎಸ್.ಮಠದ ಬಸವರಾಜ ಸುಣಗಾರ, ಆನಂದಗೌಡ ಕಾದ್ರೊಳ್ಳಿ, ಐ.ಜಿ. ಗೂಳಪ್ಪನವರ, ಬಿ.ಆರ್. ಮರಲಕ್ಕನವರ, ಬಿ.ಆರ್. ತಾಳೇಕರ, ಸಂಜು ಚಿಗರೆ, ಪಾರ್ವತಿ ಹಳೇಮನಿ, ಬಾಬು ಹೆಗಡೆ, ಶೀಲಾ ಪಾಟೀಲ, ಅಕ್ಕಮಹಾದೇವಿ ಅಂಗಡಿ, ಎಂ.ಎ. ದೇಸಾಯಿ, ಎಫ್.ಎಸ್. ಮುಲ್ಲಾ, ಸಿಎಫ್ ಪಾಟೀಲ, ಶಂಕರ ತಾರಾಪುರ, ಸಿ.ಎಸ್. ಪಾಟೀಲ, ಬಾಳು ಮಕಾಟಿ, ಎಸ್.ಡಿ.ಎಂ.ಸಿ ಸದಸ್ಯರು ಇದ್ದರು.