ರಾಮನಗರ : ಊರಿಂದ ಊರಿಗೆ ಸಂಚರಿಸಿ ಸಾರ್ವಜನಿಕ ಕಾರ್ಯಕ್ರಮ ಕೊಡುತ್ತಾ ಜೀವನ ನಡೆಸುತ್ತಿದ್ದ ರಾಜ್ಯದ ಸಾವಿರಾರು ಜನಪದ ಮತ್ತು ರಂಗಭೂಮಿ ಕಲಾವಿದರು ಕರೊನಾ ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಲಾವಿದರಿಗೆ ಕನ್ನಡ ಸಂಸ್ಕೃತಿ ಇಲಾಖೆ 2 ಸಾವಿರ ಧನಸಹಾಯ ಘೋಷಿಸಿ ಅರ್ಜಿ ಆಹ್ವಾನಿಸಿದೆ. ಆದರೆ, ಅರ್ಜಿ ಹಾಕಲೂ ಗೊತ್ತಾಗದ, ಗೊತ್ತಾದರೂ ಬೇಕಾದ ದಾಖಲಾತಿಗಳಿಲ್ಲದ ಸಾವಿರಾರು ಕಲಾವಿದರಿಗೆ ನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಅಂತಹ ಕಲಾವಿದರಲ್ಲಿ ರಾಮನಗರ ತಾಲೂಕಿನ ಚಿಕ್ಕಗಂಗವಾಡಿ ಅಂಚಿನಲ್ಲಿ ಪುಟ್ಟ ಗುಡಿಸಲು ಹಾಕಿಕೊಂಡು ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಕಲಾವಿದೆ ತೊಗಲುಗೊಂಬೆ ಗೌರಮ್ಮ.
ದೊಡ್ಡ ಗಂಗವಾಡಿಯ ಗುಡಿಸಲಿನಲ್ಲಿರುವ ಗೌರಮ್ಮ ಬಾಲ್ಯದಿಂದಲೇ ತೊಗಲು ಬೊಂಬೆಗಳ ಜತೆ ಆಡುತ್ತಲೇ ಬೆಳೆದವರು, ತಂದೆ ತಾಯಿ ಇಬ್ಬರೂ ರಂಗಭೂಮಿ ಮತ್ತು ತೊಗಲುಗೊಂಬೆ ಕಲಾವಿದರು. ರಾಮನಗರ ಭಾಗದಲ್ಲಿ ಗೌರಮ್ಮ ತೊಗಲು ಗೊಂಬೆ ಕಲೆಯನ್ನು ಜನಪ್ರಿಯಗೊಳಿಸಿದ್ದಾರೆ.
ಮುಖ್ಯವಾಗಿ ಚರ್ಮ ಹದ ಮಾಡಿ, ಬಣ್ಣ ಹೊಂದಿಸಿ, ತೊಗಲುಗೊಂಬೆ ರಚಿಸುವುದರಿಂದ ಹಿಡಿದು ಮೂವತ್ತಕ್ಕೂ ಹೆಚ್ಚು ಕಥೆಗಳನ್ನು ತೊಗಲುಗೊಂಬೆಯಲ್ಲಿ ಪ್ರದರ್ಶನ ಮಾಡುವಷ್ಟು ಪ್ರವೀಣೆಯಾಗಿದ್ದಾರೆ. ಮುಖ್ಯವಾಗಿ ಗೌರಮ್ಮ ಹರಿಕಥೆಯನ್ನೂ ಹೇಳುವ ರಂಗ ಕಲಾವಿದೆ ಕೂಡ. ಈ ಕಾರಣ ಗೌರಮ್ಮನ ತೊಗಲುಗೊಂಬೆಯಾಟಕ್ಕೆ ಒಂದು ವಿಶೇಷ ಚಹರೆ ಬಂದಿದೆ.
ನಾನು ರಂಗಭೂಮಿ ಕಲಾವಿದೆ ಕೂಡ. ಹರಿಕಥೆಯಲ್ಲಿ ಮಾತಾಡಿ ಮಾತಾಡಿ ಗಂಟಲು ಸ್ವಲ್ಪ ಒರಟಾಗಿ ಗಂಡಸಿನ ಧ್ವನಿ ಆದಂಗೆ ಆಗಿದೆ. ಹೀಗಾಗಿ ನನ್ನ ಧ್ವನಿ ಹೆಣ್ಣು ಪಾತ್ರಗಳಿಗೆ ಸರಿ ಹೋಗಲ್ಲ. ಕೇವಲ ಗಂಡು ಪಾತ್ರಗಳನ್ನು ಮಾತ್ರ ಮಾಡ್ತೀನಿ. ರಾಮಾಯಣದಲ್ಲಿ ದಶರಥ, ಕುರುಕ್ಷೇತ್ರದಲ್ಲಿ ಭೀಮ, ರಾಜಾ ಸತ್ಯವ್ರತದಲ್ಲಿ ದೇವೇಂದ್ರ, ಸಾವಿತ್ರಿಯಲ್ಲಿ ಸತ್ಯವಂತ, ಸದಾರಮೆಯಲ್ಲಿ ರಾಜ ಮಾರ್ತಾಂಡ, ಆಂಜನೇಯ ಮುಂತಾದ ಗಂಡು ಪಾತ್ರಗಳನ್ನು ಮಾಡುವೆ ಎಂದು ರಂಗಭೂಮಿ ನಂಟನ್ನು ಹಂಚಿಕೊಳ್ಳುತ್ತಾರೆ.
ಗೌರಮ್ಮನಿಗೆ ಇಬ್ಬರು ಮಕ್ಕಳು, ಒಬ್ಬರು ತಬಲಾ ಸಾತಿ, ಮತ್ತೊಬ್ಬರು ಡ್ರಾಮಾ ಮೇಷ್ಟ್ರು. ಇಬ್ಬರೂ ನಾಟಕ ಕಲಿಸುವ ಕಲಾವಿದರು. ಗೌರಮ್ಮ ಇಬ್ಬರ ಬಳಿಯೂ ಇಲ್ಲ. ಈಗಿನ ಕಾಲದ ಸೊಸೆಯರ ಬಳಿ ಹೆಚ್ಚು ಮಾತಾಡಿದ್ರೆ ಮನೆ ಹೊಡೆದೋಗುತ್ತೆ. ಹೆಂಗೋ ಬದುಕ್ಕೋಳ್ರೀ ಅಂತ ಬಿಟ್ಟಿದಿನಿ. ನನ್ನ ಪಾಡಿಗೆ ನಾನಿದಿನಿ, ಎಸ್ಸಿ ಜನ ಹನುಮಂತು ಅನ್ನೋರ ಹೊಲದಲ್ಲಿ ಒಂದು ಸಣ್ಣ ತೆಂಗಿನ ಗರಿ ಗುಡ್ಲು ಹಾಕೊಂಡು ಕಾಲ ಕಳಿತಿದೀನಿ. ಮೂರು ದೊಡ್ಡ ಆಪರೇಷನ್ ಆಗಿವೆ. ನಡೆದಾಡೋಕೆ ಆಗಲ್ಲ. ಕೂತಲ್ಲೆ ಎಲೆ ಅಡಿಕೆ ಖರ್ಚಿಗೆ ಬಳೆ ಯಾಪಾರ ಮಾಡ್ತಿದ್ದೆ. ಈ ಕರೊನಾ ಅಡ್ಡ ಬಂದು ಅದೂನು ನಿಂತೋಗಿದೆ, ಈಗ ಉಣ್ಣೋಕು ಕಷ್ಟ ಆಗೇತಿ ಎನ್ನುತ್ತಾರೆ.
ಕಲಿಯುವ ಆಸಕ್ತಿ ಇದ್ದರೆ ಕಲಿಸುವೆ : 66 ವರ್ಷದ ಗೌರಮ್ಮ ಈತನಕ ಎರಡು ಮೂರು ಬಾರಿ ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಕಲಾವಿದರ ಮಾಸಾಶನ ಈ ತನಕವೂ ಬಂದಿಲ್ಲ. ತನ್ನ ಆರೋಗ್ಯವೂ ಸರಿ ಇಲ್ಲದ ಕಾರಣ ಏನಾದ್ರೂ ಮಾಡಾಣ ಅಂದ್ರೆ ಬದುಕಿನ ದೋಣಿನೇ ಮುರುಕಲು ಆಗೋಗಿದೆ ಎಂದು ಒಗಟಾಗಿ ನೋವಿನಿಂದ ನುಡಿಯುತ್ತಾರೆ.
ಈಗಲೂ ಆಡ್ಸೋರು ಈಳ್ಯೆ ಕೊಟ್ರೆ ತನ್ನ ಶಿಷ್ಯರ ತಂಡಗಳನ್ನು ಕರೆಸಿ ಕೊಂಡು ತೊಗಲುಗೊಂಬೆಯಾಟ ಆಡಿಸುವ ಗೌರಮ್ಮ ಯಾರಾದರೂ ಕಲಿಯುವ ಆಸಕ್ತಿ ಇದ್ದವರು ಬಂದರೆ ಕಲಿಸಿಕೊಡುವೆ, ಯಾರಿಗಾದರೂ ಗೊಂಬೆಗಳು ಬೇಕಾದರೆ ಮಾಡಿಕೊಡುವೆ, ಒಟ್ಟಿನಲ್ಲಿ ಕಲೆ ಉಳಿದ್ರೆ ಸಾಕು, ಸ್ಕೂಲ್ ಮಕ್ಕಳಿಗೆ ಕಲಿ-ನಲಿ ಕಾರ್ಯಕ್ರಮದಲ್ಲಿ ಸ್ಕೂಲಲ್ಲಿ ಇರೋ ಪಾಠಗಳನ್ನೇ ಗೊಂಬೆ ಮಾಡಿ ಗೊಂಬೆಯಾಟ ಆಡ್ಸಿದಿವಿ ಎನ್ನುತ್ತಾರೆ. ಆದರೆ, ನನ್ನ ಬೊಂಬೆ ಇಡಲು ಜಾಗವೂ ಇಲ್ಲದ ಕಾರಣ ತನ್ನ ತವರು ಮನೆ ಬೆಳ್ಳೂರು ಪಕ್ಕ ಬೆಟ್ಟುಕೊಂಡನಹಳ್ಳಿಯಲ್ಲಿ ಇಟ್ಟಿದ್ದಾರೆ. ಇವರ ಬಳಿ ಕಲಿತ ಶಿಷ್ಯರೆಲ್ಲ ಬೆಳ್ಳೂರು ನಾಗಮಂಗಲ, ಕಲ್ಲೂರು ಭಾಗದಲ್ಲೇ ಇದ್ದಾರೆ.
ಸರ್ಕಾರಕ್ಕೆ ಕಣ್ಣಿಲ್ಲ, ನನಗೊಂಡು ಮನೆ ಕೊಟ್ಟು, ಕಲಾವಿದರ ಮಾಸಾಶನ ಮುಂಜೂರು ಮಾಡಿದ್ರೆ ಸಾಕು ಸಾಯೋ ಕಾಲದಲ್ಲಿ ನಾಕು ದಿನನಾದ್ರೂ ನೆಮ್ಮದೀಲಿ ಬದುಕಿ ಸಾಯ್ತೀನಿ. ಗೌರಮ್ಮ ತೊಗಲು ಬೊಂಬೆ ಆಟದ ಕಲಾವಿದೆ