ಕಳಸ ಕಲಶೇಶ್ವರ ಸ್ವಾಮಿ ಲಕ್ಷದೀಪೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. 
ನ್ಯೂಸ್

ಕಲಶೇಶ್ವರ ಸ್ವಾಮಿ ಲಕ್ಷದೀಪೋತ್ಸವ

ಕಳಸ: ಕಲಶೇಶ್ವರ ಸ್ವಾಮಿ ದೇವರ ಕಾರ್ತಿಕ ಲಕ್ಷದೀಪೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ದೀಪೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಪುಷ್ಪಗಳ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು. ನಂತರ ಕಲಶೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಶೃಂಗಾರಗೊಳಿಸಿದ ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಕಳಸ ದೇವಸ್ಥಾನದಿಂದ ರಥ ಬೀದಿಯ ಮುಖಾಂತರ ಗಿರಿಜಾಂಬ ದೇವಸ್ಥಾನದವರೆಗೆ ತರಲಾಯಿತು. ಗಿರಿಜಾಂಬ ದೇವಸ್ಥಾನದ ಮುಂಭಾಗದಲ್ಲಿ ಮಂಗಳಾರತಿ ನಡೆದು ನಂತರ ಅದೇ ಮಾರ್ಗವಾಗಿ ಉತ್ಸವಮೂರ್ತಿ ಕಲಶೇಶ್ವರ ದೇವಸ್ಥಾನ ತಲುಪಿತು.

ಕಲಶೇಶ್ವರ ದೇವಸ್ಥಾನದಿಂದ ಗಿರಿಜಾಂಬ ದೇವಸ್ಥಾನದವರೆಗೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ, ಮನೆ ಮಾಲೀಕರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿದರು. ಕಳಸ, ಮರಸಣಿಗೆ, ಹಿರೇಬೈಲು, ಸಂಸೆ, ಹೊರನಾಡು, ಬಾಳೆಹೊಳೆ ಭಾಗದ ನೂರಾರು ಭಕ್ತರು ದೀಪೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.