ನ್ಯೂಸ್

ಕಲಬುರಗಿಯಲ್ಲಿ ಶಿವಮಾಲಾ ಅಭಿಯಾನಕ್ಕೆ ಚಾಲನೆ; ಮಾರ್ಚ್ 1ರಂದು ಆಳಂದ ಚಲೋ

ಕಲಬುರಗಿ: ಆಳಂದ ಪಟ್ಟಣದಲ್ಲಿ ಶ್ರೀ ರಾಘವಚೈತನ್ಯ ಈಶ್ವರ ಲಿಂಗಕ್ಕೆ ಅಪಚಾರ ನಡೆದಿದ್ದು, ಅದನ್ನು ಶುದ್ಧೀಕರಣಗೊಳಿಸಿ ಪ್ರಾಣ ಪ್ರತಿಷ್ಠಾಪನೆ ಕೈಗೊಳ್ಳುವ ಉದ್ದೇಶದಿಂದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರಾದ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಶಿವಮಾಲಾ ಅಭಿಯಾನಕ್ಕೆ ನಗರದ ರಾಮ ಮಂದಿರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಸುಮಾರು 30ಕ್ಕೂ ಹೆಚ್ಚು ಜನರು ಶಿವಮಾಲೆ ಧರಿಸಿದರು.

ಮಾ.1ರ ಶಿವರಾತ್ರಿಯಂದು ಆಳಂದನಲ್ಲಿ ಶ್ರೀ ರಾಘವ ಚೈತನ್ಯ ಈಶ್ವರ ಲಿಂಗಕ್ಕೆ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಶಿವಮಾಲೆ ಅಭಿಯಾನ ಆರಂಭವಾಯಿತು. ಶಿವಮಾಲಾಧಾರಿಗಳು ಶಿವರಾತ್ರಿವರೆಗೆ ಮನೆಯಲ್ಲಿ ವೃತಾಚರಣೆ ಮಾಡಲಿದ್ದು, `ಆಳಂದ ಚಲೋ' ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದರು.

ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮೊಘಲರು ಪುರಾತನ ರಾಘವ ಚೈತನ್ಯ ಮಂದಿರವನ್ನು ಧ್ವಂಸ ಮಾಡಿ ದರ್ಗಾ ನಿರ್ಮಿಸಿದ್ದಾರೆ. 1964ರಿಂದ ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ಇದೆ. ಕಳೆದ ಕೆಲವು ದಿನಗಳ ಹಿಂದೆ ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ಅಪಮಾನ ಮಾಡಲಾಗಿದೆ ಎಂದು ದೂರಿದರು.

ಲಿಂಗಕ್ಕೆ ಅಪಮಾನಗೈದ ಬಗ್ಗೆ ಆಳಂದ ಶಾಸಕರು ಸದನದ ಗಮನಕ್ಕೆ ತಂದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಶಿವರಾತ್ರಿಗಿಂತ ಮೊದಲು ದತ್ತಮಾಲೆ ಮಾದರಿಯಲ್ಲಿ ಶಿವಮಾಲೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ವರ್ಷ ಸುಮಾರು 500 ಜನರು ಶಿವಮಾಲೆ ಧರಿಸಲಿದ್ದಾರೆ. ಇನ್ನು ಮುಂದೆ ಪ್ರತಿವರ್ಷ ಈ ಅಭಿಯಾನ ಜರುಗಲಿದೆ ಎಂದರು.

ಜಿಲ್ಲಾಧ್ಯಕ್ಷ ಮಹೇಶ ಗೊಬ್ಬುರ, ಪ್ರಮುಖರಾದ ಮಹೇಶ ಕುಲ್ಕರ್ಣಿ, ಈಶ್ವರ ಹಿಪ್ಪರಗಿ, ಸಂತೋಷ ಬೆನಕನಳ್ಳಿ, ಮಹೇಶ ಕೆಂಭಾವಿ ಇತರರಿದ್ದರು.

ಆಳಂದದ ಶ್ರೀ ರಾಘವಚೈತನ್ಯ ಲಿಂಗದ ಬಳಿ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಬೇಕು. ಈಶ್ವರ ಲಿಂಗವನ್ನು ಅಲ್ಲಿಂದ ತೆರವುಗೊಳಿಸುವ ಷಡ್ಯಂತ್ರಗಳು ನಡೆದಿದ್ದು, ರಕ್ಷಣೆ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಭಾಗವಹಿಸಿ, ನಮ್ಮ ದೇವಸ್ಥಾನಗಳ ರಕ್ಷಣೆಗಾಗಿ ದುಡಿಯಬೇಕು.
| ಶ್ರೀ ಸಿದ್ಧಲಿಂಗ ಸ್ವಾಮೀಜಿ
ಆಂದೋಲಾ