ನ್ಯೂಸ್

ಕರ್ನಾಟಕ ವೀರ ಕೇಸರಿ ಪಡೆ ಪ್ರತಿಭಟನೆ

ಶ್ರೀರಾಂಪುರ ಪಟ್ಟಣ ಪಂಚಾಯಿತಿಯಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ವೀರ ಕೇಸರಿ ಪಡೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಶ್ರೀರಾಂಪುರ ಪಟ್ಟಣ ಪಂಚಾಯಿತಿಯಲ್ಲಿ ಕರ ವಸೂಲಿಗಾರ ಕುಮಾರಸ್ವಾಮಿ, ರಾಜಸ್ವ ನಿರೀಕ್ಷಕ ಶಕೀಲ್ ಅಹಮ್ಮದ್ ಸೇರಿ ಖಾತೆದಾರರಿಂದ ವಸೂಲ ಮಾಡಿರುವ ಸುಮಾರು 1,16,965 ರೂ.ಗಳನ್ನು ಪಟ್ಟಣ ಪಂಚಾಯಿತಿ ಖಾತೆಗೆ ವರ್ಗಾಯಿಸದೆ ತಮ್ಮ ಸ್ವಂತ ಖಾತೆಗೆ ವರ್ಗಾಹಿಸಿಕೊಂಡು ಹಣ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಆದರೆ, ಇವರ ವಿರುದ್ಧ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಕಾರಣ ಕೇಳಿ ನೋಟಿಸ್ ನೀಡಿದಂತೆ ನಾಟಕವಾಡುತ್ತಿದ್ದಾರೆ ಎಂದು ದೂರಿದರು.

ಶ್ರೀರಾಂಪುರ ಪಟ್ಟಣ ಪಂಚಾಯಿತಿ ಖಾತೆದಾರರಿಗೆ ನೀಡುವ ನಮೂನೆ-3ಗೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಒಂದೊಂದು ಸಬೂಬು ಹೇಳಿ ಅಲೆಸುತ್ತಾರೆ. ಮಧವರ್ತಿಗಳ ಮೂಲಕ ಬಂದರೆ ಕ್ಷಣ ಮಾತ್ರದಲ್ಲಿಯೇ ನಮೂನೆ-3 ಮಾಡಿಕೊಡುತ್ತಾರೆ. ಆದರೆ, ನೇರವಾಗಿ ಅರ್ಜಿ ಸಲ್ಲಿಸುವ ಖಾತೆದಾರರಿಗೆ ದಾಖಲೆಗಳು ಸರಿ ಇಲ್ಲವೆಂದು ಸಬೂಬು ಹೇಳುತ್ತಾ ಕಚೇರಿಗೆ ಅಲೆದಲೆದು ಸಾಕಾಗುವಂತೆ ಮಾಡುತ್ತಾರೆ. ಇಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ಮಧವರ್ತಿಗಳ ಪಡೆಯೇ ಇದೆ. ಸಾರ್ವಜನಿಕರು ಯಾವುದೇ ಸೇವೆ ಪಡೆಯಬೇಕಾದರೆ ಮಧವರ್ತಿಗಳ ಮೂಲಕ ಬಂದರೆ ಮಾತ್ರ ಕ್ಷಣ ಮಾತ್ರದಲ್ಲಿ ಖಾತೆ, ಕಂದಾಯ, ನಮೂನೆ-3 ಸಿಗುತ್ತದೆ. ಇಲ್ಲವಾದರೆ ಸರ್ಕಾರಿ ಸವಲತ್ತು ಬಡವರಿಗೆ ಗಗನ ಕುಸುಮದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಬರುವ ಹಣ ಸರ್ಕಾರದಿಂದ ಅನ್ಯಕ್ರಾಂತಿ (ಅಲಿನೇಷನ್) ಆಗದ ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ದುರುಪಯೋಗ ಮಾಡಿಕೊಂಡು ನಮೂನೆ-3ನ್ನು ನಿಯಮಗಳ ಪ್ರಕಾರ ಅನಧಿಕೃತ ಎಂದು ಕೊಡುವ ಬದಲು ಕೆಲವು ಪ್ರಭಾವಿ ಮುಖಂಡರುಗಳಿಗೆ ಅಧಿಕೃತವೆಂದು ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶೇ.24ರ ಯೋಜನೆಯ ಅಭಿವೃದ್ಧಿಯ ಹಣ ಕೂಡ ದುರುಪಯೋಗ ಮಾಡಿಕೊಂಡಿದ್ದಾರೆ. ನಮೂನೆ-3ಗೆ ಅರ್ಜಿ ಸಲ್ಲಿಸಲು ಸಕಾಲ ರೀತಿಯಲ್ಲಿ ಆನ್‌ಲೈನ್ ಅರ್ಜಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳವಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಧುವನ ಚಂದ್ರು, ವಿಷ್ಣು, ಸಿದ್ದರಾಜು, ಚೌಡನಾಯಕ, ಮರಿಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.