ಗುಂಡ್ಲುಪೇಟೆ: ಕರ್ನಾಟಕ- ತಮಿಳುನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಉಂಟಾಗಿತ್ತು.
ತಾಲೂಕಿನ ಮೇಲುಕಾಮನಹಳ್ಳಿ ರಸ್ತೆಯಲ್ಲಿ ಬೆಳಗ್ಗಿನ ಜಾವ 3 ಗಂಟೆ ವೇಳೆಯಲ್ಲಿ ಬೆಂಗಳೂರಿನಿಂದ ಊಟಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ( ಐರಾವತ) ತಳಭಾಗಕ್ಕೆ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಚಲಿಸಲು ಸಾಧ್ಯವಾಗದೆ ಸ್ಥಳದಲ್ಲೇ ನಿಂತು ಹೋಗಿತ್ತು.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿ-ಕೆಕ್ಕನಹಳ್ಳ ಮಾರ್ಗದಲ್ಲಿ ವನ್ಯಜೀವಿಗಳ ಹಿತದೃಷ್ಟಿಯಿಂದ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಅನುಮತಿ ಇಲ್ಲ. ಈ ಅವಧಿಯಲ್ಲಿ ರಸ್ತೆಗೆ ಗೇಟ್ ಮುಚ್ಚಿ ಬಂದ್ ಮಾಡಲಾಗುತ್ತದೆ. ಆದರೆ ಅಂತರರಾಜ್ಯ ಓಡಾಟ ನಡೆಸುವ 3 ಕೆಎಸ್ಸಾರ್ಟಿಸಿ ಬಸ್ ಗಳಿಗೆ ಮಾತ್ರ ಸಂಚಾರಿಸಲು ವಿಶೇಷ ಅನುಮತಿ ಇದೆ. ಶುಕ್ರವಾರ ಬೆಳಗ್ಗಿನ ಜಾವ 3 ಗಂಟೆ ವೇಳೆಯಲ್ಲಿ ಊಟಿಗೆ ತೆರಳುತ್ತಿದ್ದ ಐರಾವತ ಬಸ್ ಗೆ ಗೇಟ್ ತೆರೆಯಲು ಮತ್ತು ಮುಚ್ಚಲು ಅಳವಡಿಸಿದ್ದ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಸಾಗಲು ಸಾಧ್ಯವಾಗಿಲ್ಲ.
ಇದರಿಂದಾಗಿ ಬೆಳಗ್ಗೆ 6 ಗಂಟೆ ಬಳಿಕ ಬಂದ ಬೇರೆ ವಾಹನಗಳು ರಸ್ತೆಯಲ್ಲಿ ಮುಂದೆ ಸಾಗಲು ಸ್ಥಳಾವಕಾಶವಿಲ್ಲದೆ ಸುಮಾರು 2 ಕಿ.ಮೀ ಸಂಚಾರ ದಟ್ಟಣೆ ಉಂಟಾಯಿತು. ಬಂಡೀಪುರ ಸಫಾರಿ ವಾಹನಗಳಿಗೆ ಕಾಡಿನೊಳಗೆ ಪರ್ಯಾಯ ಮಾರ್ಗ ಕಲ್ಪಿಸಿಕೊಡಲಾಗಿತ್ತು.