ನ್ಯೂಸ್

ಕರೊನಾ ಸೋಂಕು ತಡೆಗೆ ಮುಂಜಾಗ್ರತೆಯೊಂದೇ ಮಾರ್ಗ: ಎ.ಮಂಜು

ಅರಕಲಗೂಡು: ಶರವೇಗದಲ್ಲಿ ಸಮುದಾಯಕ್ಕೆ ಹಬ್ಬುತ್ತಿರುವ ಮಹಾಮಾರಿ ಕರೊನಾ ಸೋಂಕು ತಡೆಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು, ಮುಖ್ಯವಾಗಿ ಕರೊನಾ ವಾರಿಯರ್ಸ್ ಗಳು ಮತ್ತಷ್ಟು ಜಾಗೃತರಾಗಬೇಕು ಎಂದು ಮಾಜಿ ಸಚಿವ ಎ. ಮಂಜು ಮನವಿ ಮಾಡಿದರು.

ತಾಲೂಕಿನ ಬರಗೂರಿನಲ್ಲಿ ಎ. ಮಂಜು ಅಭಿಮಾನಿ ಬಳಗದ ವತಿಯಿಂದ ದೊಡ್ಡಮಗ್ಗೆ ಹೋಬಳಿ ಕರೊನಾ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಮಹಾಮಾರಿ ಕರೊನಾ ಸೋಂಕು ಇದೀಗ ಸಮುದಾಯಕ್ಕೆ ಹಬ್ಬುತ್ತಿದ್ದು ಅಮಾಯಕರ ಬದುಕನ್ನು ಕತ್ತಲೆಯ ಕೂಪಕ್ಕೆ ದೂಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಹಾಗಾಗಿ ಕರೊನಾ ವಾರಿಯರ್ಸ್ ಗಳು ಹೆಚ್ಚು ಜಾಗೃತರಾಗಿ ಸಮುದಾಯಕ್ಕೆ ಸೋಂಕು ತಗುಲದಂತೆ ನಿಗಾ ವಹಿಸಿ ಕರ್ತವ್ಯ ನಿರ್ವಹಿಸುವುದು ಅತ್ಯವಶ್ಯಕ. ಎಲ್ಲಕ್ಕಿಂತ ಮುಖ್ಯವಾಗಿ ಮದ್ದಿಲ್ಲದ ಕರೊನಾ ಕಾಯಿಲೆಗೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಪರಸ್ಪರ ಅಂತರ ಕಾಪಾಡಿಕೊಂಡು ಪರಿಹಾರ ಮಾರ್ಗಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.

ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವಾರು ಕರೊನಾ ಸೇನಾನಿಗಳಿಗೆ ಹೂಮಳೆಗರೆದು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮಂಜುನಾಥ್, ದೊಡ್ಡಮಗ್ಗೆ ಕ್ಷೇತ್ರದ ಜಿಪಂ ಸದಸ್ಯ ರವಿ, ತಾಪಂ ಸದಸ್ಯ ಪುಟ್ಟರಾಜು, ಮುಖಂಡರಾದ ಎ.ಎಂ. ರಘು, ನಾಗರಾಜು, ರಂಗನಾಥ್,‌ಅಶೋಕ್, ಮುತ್ತಿಗೆ ರಮೇಶ್, ಈಶ್ವರ್, ಉದೇಶ್, ಕೆ.ಆರ್. ಹೊಯ್ಸಳ ಮುಂತಾದವರು ಹಾಜರಿದ್ದು ಸಹಕರಿಸಿದರು.