ನ್ಯೂಸ್

ಕರೊನಾ ಸೋಂಕಿತರಿಂದ ಸುಲಿಗೆ ಮಾಡುತ್ತಿರುವ ಸ್ಪರ್ಶ್ ಆಸ್ಪತ್ರೆ ನಾವೇ ಮುಚ್ಚಿಸುತ್ತೇವೆ: ಎಚ್.ಡಿ.ರೇವಣ್ಣ ಕಿಡಿ

ಹಾಸನ: ಕರೊನಾ ಸೋಂಕಿತರ ಚಿಕಿತ್ಸೆಗೆ ದುಬಾರಿ ಬಿಲ್ ವಿಧಿಸುತ್ತಿರುವ ನಗರದ ಸ್ಪರ್ಶ್ ಆಸ್ಪತ್ರೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಆಡಳಿತ ಇದ್ಯೋ ಇಲ್ವೋ ಗೊತ್ತಾಗುತ್ತಿಲ್ಲ. ಕರೊನಾ ಚಿಕಿತ್ಸೆ ಗೆ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ ಲಕ್ಷ ರೂ. ವಸೂಲಿ ಮಾಡುತ್ತಿದ್ದಾರೆ. ಒಬ್ಬೊಬ್ಬ ರೋಗಿಗೆ ಹತ್ತರಿಂದ ಹದಿನೈದು ಲಕ್ಷ ರೂ. ಬಿಲ್ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಈ ವಸೂಲಿ ಬಗ್ಗೆ ಯಾರೂ ಕೇಳೋರೇ ಇಲ್ಲದಂತಾಗಿದೆ. ಹಾಸನದ ಸ್ಪರ್ಶ್ ಆಸ್ಪತ್ರೆ ನಾವೇ ಬಾಗಿಲು ಹಾಕಿಸುತ್ತೇವೆ. ಈ ಚುನಾವಣೆ ಮುಗಿಲಿ ಎಂದು ಸುಮ್ಮನಿದ್ದೇನೆ ಎಂದರು.

ಡಿಸಿ ಈಗಲೇ ಖಾಸಗಿ ಆಸ್ಪತ್ರೆ ವೈದ್ಯರ ಸಭೆ ಕರೆದು ಕ್ರಮ ಕೈಗೊಳ್ಳಲಿ. ಇಂತಹ ಕೆಟ್ಟ ಪರಿಸ್ಥಿತಿ ನನ್ನ ಅನುಭವದಲ್ಲಿ ಎಂದೂ ನೋಡಿಲ್ಲ.

ರೇಖಾ ಎಂಬ ಯುವತಿಗೆ ಹತ್ತು ಲಕ್ಷ ಬಿಲ್ ಮಾಡಿದ್ದಾರೆ. ಆದರೂ ಆಕೆ ಬದುಕುಳಿದಿಲ್ಲ, ಮೃತದೇಹ ಇಟ್ಟುಕೊಂಡು ಬಿಲ್‌ ಕೇಳ್ತಾರೆ ಎಂದು‌ ಕಿಡಿಕಾರಿದರು.

ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಹೀಗಾದ್ರೆ ಸಾರ್ವಜನಿಕರೇ ದಂಗೆ ಏಳಬೇಕಾಗುತ್ತೆ ಎಚ್.ಡಿ.ರೇವಣ್ಣ ಎಚ್ಚರಿಸಿದರು.