ನ್ಯೂಸ್

ಕರೊನಾ ಸೈಡ್ ಎಫೆಕ್ಟ್​ಗೆ 11 ಸಾವು: ಟಿಕ್​ಟಾಕ್​ಗೆ ಬಲಿಯಾದ ಯುವಕರು, ಬೊಲೆರೊ-ಟ್ರ್ಯಾಕ್ಟರ್​ ಅಪಘಾತ

ಬೆಂಗಳೂರು: ಕರೊನಾ ವೈರಸ್ ಸೋಂಕು ತಗುಲದಿದ್ದರೂ ಅದರ ಸೈಡ್ ಎಫೆಕ್ಟ್​ನಿಂದಾಗಿ ರಾಜ್ಯದ ವಿವಿಧೆಡೆ ಒಟ್ಟು 11 ಮಂದಿ ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಸುಣ್ಣದಕೊಪ್ಪ ಚೆಕ್​ಪೋಸ್ಟ್ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಶನಿವಾರ ರಾತ್ರಿ ಕುಸಿದು ಬಿದ್ದಿದ್ದ ಸುಣ್ಣದಕೊಪ್ಪದ ಗ್ರಾಮದ ಲಕ್ಷ್ಮಣ ನಾಯ್್ಕ50) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕುಟುಂಬದವರು ಅಸಹಜ ಸಾವು ದೂರು ನೀಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕ್ರಮಕೈಗೊಳ್ಳಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ 3 ಬಲಿ: ಕರೊನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಕೂಲಿ ಕಾರ್ವಿುಕರಿದ್ದ ಟ್ರ್ಯಾಕ್ಟರ್ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಕೆ.ಆರ್.ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಕಲುಬರಗಿ ಜಿಲ್ಲೆ ಜೇವರ್ಗಿಯ ಮೌನೇಶ್, ಸಕ್ಕಪ್ಪ, ಮಹದೇವಪ್ಪ ಮೃತರು. ಕಾರ್ವಿುಕರಿದ್ದ ಟ್ರಾಕ್ಟರ್​ ಹಾಗೂ ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿದೆ.

ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ: ಹೋಂ ಕ್ವಾರಂಟೈನ್​ನಲ್ಲಿದ್ದ ಶ್ರವಣಬೆಳಗೊಳದ ಮಂಚೇನಹಳ್ಳಿಯ ವಿಷಕಂಠೇಗೌಡ (58) ಭಾನುವಾರ ಬೆಳಗ್ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಮುಂಬೈನಲ್ಲಿ ವಾಸವಿದ್ದ ಇವರು ಯುಗಾದಿ ಪ್ರಯುಕ್ತ ಬುಧವಾರ ಗ್ರಾಮಕ್ಕೆ ಬಂದಿದ್ದರಿಂದ ವೈದ್ಯರು ಪರೀಕ್ಷಿಸಿ, ಹೋಂ ಕ್ವಾರಂಟೈನ್​ನಲ್ಲಿರಲು ಸೂಚಿಸಿದ್ದರು. ಇವರು ಕಿಡ್ನಿ, ಅಸ್ತಮಾ ಹಾಗೂ ಕ್ಷಯ ರೋಗದಿಂದ ಬಳಲುತ್ತಿದ್ದು, ಜಿಗುಪ್ಸೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಟಿಕ್​ಟಾಕ್ ಮಾಡಲು ಹೋಗಿ ಸಾವು: ನಾಗಮಂಗಲ ತಾಲೂಕಿನ ದುಮ್ಮಸಂದ್ರ ಕೆರೆಯಲ್ಲಿ ತೆಪ್ಪದ ಮೇಲೆ ಟಿಕ್​ಟಾಕ್ ಮಾಡಲು ಹೋದ ಬೆಂಗಳೂರು ಮೂಲದ ಭರತ್ (18) ಅಭಿಷೇಕ್ (20) ಮೃತಪಟ್ಟಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮೂವರು ವಡೇರಹಳ್ಳಿಯಲ್ಲಿನ ಅಜ್ಜಿ ಮನೆಗೆ ಬಂದಿದ್ದು ತೆಪ್ಪದಲ್ಲಿದ್ದಾಗ ಮಗುಚಿ ಬಿದ್ದಿದೆ. ಶಿವರಾಜು (28) ಈಜಿ ದಡ ಸೇರಿದ್ದಾರೆ.

ಸಕಾಲದಲ್ಲಿ ಆಸ್ಪತ್ರೆ ತಲುಪಲಾಗದೆ ವೃದ್ಧೆ ಮರಣ: ಕರೊನಾ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಪ್ರದೇಶ, ತಲಪಾಡಿ ಗಡಿಭಾಗ ಮುಚ್ಚುಗಡೆ ಮಾಡಿರುವುದರಿಂದ ಸಕಾಲದಲ್ಲಿ ಆಸ್ಪತ್ರೆ ತಲುಪಲಾಗದ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದ ಪಾತುಂಞಿ(70) ಎಂಬುವರು ಮೃತಪಟ್ಟಿದ್ದಾರೆ.

ಮದ್ಯಕ್ಕಾಗಿ ಪ್ರಾಣ ಬಿಟ್ಟರು

ಲಾಕ್​ಡೌನ್​ನಿಂದಾಗಿ 5 ದಿನಗಳಿಂದ ಕುಡಿಯಲು ಮದ್ಯ ಸಿRಲ್ಲ ಎಂದು ಬೇಸರಗೊಂಡು ಭಾಲ್ಕಿ ಗಾಂಧಿ ವೃತ್ತ ಹತ್ತಿರದ ಉಡುಪಿ ಹೋಟೆಲ್​ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕುಂದಾಪುರ ಮೂಲದ ಭಾಸ್ಕರ್(40) ಭಾನುವಾರ ಬೆಳಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರಿಗೆ ಮಾಹಿತಿ ನೀಡಿ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದರು. ಧಾರವಾಡದ ರಾಜೀವಗಾಂಧಿ ನಗರದ ವಿದ್ಯಾನಗರದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ವಿುಕ ಉಮೇಶ ನಾಗಪ್ಪ ಹಡಪದ (46) ಮದ್ಯ ಸಿಗದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಪು ಪಡುಗ್ರಾಮದ ರಾಮನಗರ ನಿವಾಸಿ ಶಶಿಧರ ಸುವರ್ಣ(46) ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡ್ಡಿದ್ದಾರೆ. ಮದ್ಯ ಸಿಗದ್ದಕ್ಕೆ ತುಮಕೂರು ಜಿಲ್ಲೆ ಐ.ಡಿ.ಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಹನುಮಂತರಾಯಪ್ಪ (60) ಕತ್ತು ಕೊಯ್ದುಕೊಂಡಿದ್ದಾರೆ. ತೀವ್ರ ರಕ್ತಸ್ರಾವಕ್ಕೀಡಾಗಿರುವ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.