ನ್ಯೂಸ್

ಕರೊನಾ ವಿರುದ್ಧ ಹೋರಾಟದಲ್ಲಿ ಗೆದ್ದು ಬಂದ ರೈತ ಕುಟುಂಬಕ್ಕೆ ಕಾದಿತ್ತು ಆಶ್ಚರ್ಯ!

ಸೋಮವಾರಪೇಟೆ: ಗದ್ದೆಯಲ್ಲಿ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕುಟುಂಬಕ್ಕೆ ಕರೊನಾ ವಕ್ಕರಿಸಿ ಮನೆಯೆಲ್ಲ ಕೋವಿಡ್ ಆಸ್ಪತ್ರೆ ಸೇರಿದರು. ಆದರೆ ಗದ್ದೆ ಮಾತ್ರ ಪಾಳು ಬೀಳಲಿಲ್ಲ! ತಾಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದ ಬಡ ಕುಟುಂಬಕ್ಕೆ ಸೇರಿದ ಅರ್ಧಕ್ಕೆ ನಿಂತಿದ್ದ ನಾಟಿ ಕಾರ್ಯವನ್ನು ಗ್ರಾಮಸ್ಥರೆಲ್ಲ ಸೇರಿ ಮುಗಿಸಿ ನೆರವಾಗಿದ್ದಾರೆ. ಮಾನವೀಯತೆ ಗ್ರಾಮೀಣ ಭಾಗದಲ್ಲಿ ಈಗಲೂ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ತಲ್ತಾರೆಶೆಟ್ಟಳ್ಳಿ ಗ್ರಾಮದ ಪುಟ್ಟಯ್ಯಗೆ 2 ಎಕರೆ ಗದ್ದೆ ಇದೆ. ಪ್ರತಿವರ್ಷ ಭತ್ತ ಬೆಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಈ ಬಾರಿ ನಾಟಿಗೆ ಸಜ್ಜಾಗುತ್ತಿರುವಾಗ ಅವರೂ ಸೇರಿ ಪತ್ನಿ, ಮಗಳು, ಅಳಿಯ ಎಲ್ಲರಿಗೂ ಕೋವಿಡ್ ಬಂದು ಆಸ್ಪತ್ರೆ ಸೇರಿದ್ದರು. ಇಂಥ ಸಂಕಷ್ಟದಲ್ಲಿ ಗ್ರಾಮದ ಕುರಾದಗೌಡ್ನ, ಬಸವೇರ, ಚಿಟ್ಟೆರಾ ಗ್ರೂಪ್​ನವರು ತಮ್ಮದೇ ಖರ್ಚಿನಲ್ಲಿ ಗದ್ದೆ ಉಳುಮೆ ಮಾಡಿ, ನಾಟಿ ಮಾಡಿ ಮುಗಿಸಿದ್ದರು. ಹತ್ತು ದಿನ ಚಿಕಿತ್ಸೆ ಪಡೆದು, ಕರೊನಾ ಗೆದ್ದು ಆಂಬುಲೆನ್ಸ್​ನಲ್ಲಿ ಶನಿವಾರ ಮನೆಗೆ ಬಂದ ಕುಟುಂಬವನ್ನು ಗ್ರಾಮಸ್ಥರು ಹಾರ ಹಾಕಿ ಸ್ವಾಗತಿಸಿದಾಗ ಆಶ್ಚರ್ಯ ಕಾದಿತ್ತು, ಗದ್ದೆಯಲ್ಲಿ ನಾಟಿ ಆಗಿದ್ದನ್ನು ಕಂಡು ಸಂತಸಗೊಂಡ ರೈತ ಪುಟ್ಟಯ್ಯ ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿದರು.

ಕಷ್ಟದಲ್ಲಿರುವವರಿಗೆ ಗ್ರಾಮಸ್ಥರು ಸಹಾಯ ಮಾಡುವುದು ಮಾನವೀಯತೆ. ಕೋವಿಡ್ ಸೋಂಕಿತ ಕುಟುಂಬಕ್ಕೆ ಎಲ್ಲ ಸಹಕಾರ ನೀಡಲಾಗಿದೆ. ಎರಡೂವರೆ ವರ್ಷದ ಮಗುವಿಗೆ ಕೋವಿಡ್ ಇರಲಿಲ್ಲ. ಆ ಮಗುವನ್ನು ಗ್ರಾಮದಲ್ಲೇ ಆರೈಕೆ ಮಾಡಲಾಯಿತು. | ಬಿ.ಪಿ.ಅನಿಲ್​ಕುಮಾರ್, ಮಾಜಿ ಅಧ್ಯಕ್ಷ, ಶಾಂತಳ್ಳಿ ಗ್ರಾಮ ಪಂಚಾಯಿತಿhttps://www.vijayavani.net/dr-giridhar-kaje-first-reaction-about-current-happenings/