ನ್ಯೂಸ್

ಕರೊನಾ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡವರಿಗೆ ವಂಚಿಸುತ್ತಿದ್ದ ಗ್ಯಾಂಗ್ ಸೆರೆ

ಬೆಂಗಳೂರು : ಕೋವಿಡ್-19ರ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ನೌಕರಿ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ಮೋಸ ಮಾಡುತ್ತಿದ್ದ ಆಂಧ್ರ ಗ್ಯಾಂಗ್‌ನನ್ನು ಸಂಪಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಸಾಯಿ ಕಲ್ಯಾಣ್ ರಾಮ್(33), ದಿಲೀಪ್‌ಕುಮಾರ್(22), ವಿಶ್ವನಾಥ್ (28), ಪತ್ತಿ ಶಿವ(26) ಮತ್ತು ಬೆಂಗಳೂರಿನ ಶ್ರೀಧರ್ ಕೊಲ್ಲೂರು(36) ಬಂಧಿತರು. ಕೆಲ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿವಾಜಿನಗರದ ಯೂನಿಯನ್ ಸ್ಟ್ರೀಟ್ ಇನ್‌ಫೆಂಟ್ರಿ ರಸ್ತೆಯಲ್ಲಿ ರೆಂಟ್ ಎ ಡೆಸ್ಕ್ ಕಟ್ಟಡದಲ್ಲಿ ಕೊಠಡಿ ಬಾಡಿಗೆ ಪಡೆದು ಆರೋಪಿಗಳು ಎಚ್‌ಆರ್ ಇಂಡಿಯಾ ಸರ್ವೀಸ್ ಎಂಬ ಕಚೇರಿ ತೆರೆದಿದ್ದರು. ಇದಲ್ಲದೆ, ಪ್ರತಿಷ್ಠಿತ ಸ್‌ಟಾವೇರ್ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಸಂಪರ್ಕ ಮಾಡಿ ಅವರಿಗೆ ಕೆಲಸಕ್ಕಾಗಿ ಉದ್ಯೋಗ ಆಕಾಂಕ್ಷಿಗಳು ಕೊಟ್ಟಿರುವ ಬಯೋ ಡೆಟಾಗಳನ್ನು ಖರೀದಿಸುತ್ತಿದ್ದರು. ಅದರಲ್ಲಿ ಇರುವ ಮೊಬೈಲ್ ನಂಬರ್‌ಗೆ ಕರೆ ಮಾಡಿ ಕೆಲಸ ಕೊಡಿಸುವುದಾಗಿ ನಂಬಿಸಿ 20 ರಿಂದ 1 ಲಕ್ಷ ರೂ. ವರೆಗೂ ಶುಲ್ಕದ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಆನ್‌ಲೈನ್‌ನಲ್ಲಿ ಸಂದರ್ಶನ ನಡೆಸಿ ಕೆಲಸ ನೇಮಕಾತಿ ಪ್ರತಿಯನ್ನು ಕೊಟ್ಟು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ಇವರಿಂದ ನೇಮಕಾತಿ ಪ್ರಮಾಣ ಪತ್ರ ಪಡೆದವರ ಪೈಕಿ ಕೆಲವರು ನ.1ರಂದು ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಇರುವ ರೀಗಸ್ ಈ ವನ್ ಬ್ಲಾಕ್ ಮಾನ್ಯತಾ ಎಂಬೆಸಿಗೆ ಸಂದರ್ಶನಕ್ಕೆ ತೆರಳಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮೋಸಕ್ಕೆ ಒಳಗಾದವರು ಮಾರನೇ ದಿನ ಆರೋಪಿಗಳ ಕಚೇರಿಗೆ ಬಂದು ನೋಡಿದಾಗ ಬೀಗ ಜಡಿದಿತ್ತು. ನೊಂದ ನೌಕರಿ ಆಕಾಂಕ್ಷಿಗಳು ಕೊಟ್ಟ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ವಿಚಾರಣೆ ವೇಳೆ 500ಕ್ಕೂ ಅಧಿಕ ಮಂದಿಗೆ ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವ-ವಿವರಗಳೇ ದಾಖಲೆಗಳು :

ನೌಕರಿ ಬಯಸಿ ನಿರುದ್ಯೋಗಿಗಳು ಕೊಡುತ್ತಿದ್ದ ಸ್ವ-ವಿವರಗಳನ್ನೇ ಬಳಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಅದರಲ್ಲಿ ಆರೋಪಿಗಳು ತಮ್ಮ ಮೊಬೈಲ್ ನಂಬರ್, ಇಮೇಲ್ ವಿಳಾಸ ಕೊಡುತ್ತಿದ್ದರು. ಅಮಾಯಕರಿಂದ ಈ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡು ಡ್ರಾ ಮಾಡುತ್ತಿದ್ದರು. ಹಣ ಜಮೆ ಮತ್ತು ಡ್ರಾದ ಸಂದೇಶಗಳು ಇವರ ಮೊಬೈಲ್ ನಂಬರ್‌ಗೆ ಬರುತ್ತಿದ್ದವು.