| ಹರೀಶ್ ಬೇಲೂರು ಬೆಂಗಳೂರು
ಕರೊನಾ ರೂಪಾಂತರಿ ಒಮಿಕ್ರಾನ್ ವೈರಾಣು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ನೂರಾರು ಕೋಟಿ ರೂ. ಮೌಲ್ಯದ ಔಷಧ ಹಾಗೂ ಪರಿಕರಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರ ದಾಸ್ತಾನು ಮಾಡಿಕೊಂಡಿದೆ. ಕರೊನಾ 3ನೇ ಅಲೆಗೆ ಸಕಾಲದಲ್ಲಿ ಔಷಧಗಳು ಲಭ್ಯವಿರುವ ಹಿನ್ನೆಲೆಯಲ್ಲಿ ದಾಸ್ತಾನು ಮಾಡಿದ್ದು, ಸಾರ್ವಜನಿಕರು ಹೆದರಬೇಕಿಲ್ಲ. ಕರೊನಾ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಔಷಧ ಕೊರತೆಯಿಂದ ಸಾವಿರಾರು ರೋಗಿಗಳು ತೊಂದರೆ ಅನುಭವಿಸಿದ್ದರು. ಈ ಹಿಂದೆ ಆಗಿದ್ದ ತಪು್ಪ ಮರುಕಳಿಸದಂತೆ ಹಾಗೂ 3ನೇ ಅಲೆಯಲ್ಲಿ ಔಷಧ ಕೊರತೆ ಎದುರಾಗದಂತೆ ಆರೋಗ್ಯ ಇಲಾಖೆ ಅಧೀನದ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್ಎಂಎಸ್ಸಿಎಲ್) ಈಗಾಗಲೆ ಸಾವಿರಾರು ವೆಂಟಿಲೇಟರ್, ಆಮ್ಲಜನಕ ಸಾಂಧ್ರಕ, ಆಕ್ಸಿಜನ್ ಸಿಲಿಂಡರ್ಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ಸ್ಥಾಪಿಸಿದರೆ, ಲಕ್ಷಾಂತರ ರೆಮ್ೆಸಿವರ್, ಆಂಪೋಟೆರಿಸನ್ ಬಿ ಹಾಗೂ ಎನೋಕ್ಸಪರಿನ್ ಚುಚ್ಚುಮದ್ದು ಖರೀದಿಸಿ ಗೋದಾಮಿನಲ್ಲಿ ದಾಸ್ತಾನು ಮಾಡಿಕೊಂಡಿದೆ.
3,507 ವೆಂಟಿಲೇಟರ್ಗಳು: ಕರೊನಾ ಮೊದಲ ಮತ್ತು 2ನೇ ಅಲೆಯಲ್ಲಿ ವೆಂಟಿಲೇಟರ್ಗಳ ಕೊರತೆಯಿಂದ ನೂರಾರು ರೋಗಿಗಳು ಜೀವ ಚೆಲ್ಲಿದ್ದಾರೆ. ಈ ಬಾರಿ ವೆಂಟಿಲೇಟರ್ ಕೊರತೆ ನಿವಾರಿಸಲು ಯೋಜನೆ ರೂಪಿಸಲಾಗಿದೆ. ಪಿಎಂ ಕೇರ್ಸ್ನಿಂದ ಕರ್ನಾಟಕಕ್ಕೆ ಇದುವರೆಗೆ ಬಂದಿರುವ 2,871 ವೆಂಟಿಲೇಟರ್ಗಳ್ನು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ. ಕಾಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್ಆರ್) 158 ವೆಂಟಿಲೇಟರ್ಗಳು ನಿಗಮಕ್ಕೆ ಬಂದಿವೆ. ಅಲ್ಲದೆ, 158 ವೆಂಟಿಲೇಟರ್ಗಳನ್ನು ನಿಗಮ ಖರೀದಿಸಿದೆ. ಒಟ್ಟಾರೆ 3,507 ವೆಂಟಿಲೇಟರ್ಗಳು ರೋಗಿಗಳ ಆರೈಕೆಗೆ ಸಿದ್ಧವಾಗಿವೆ.
8,023 ಆಮ್ಲಜನಕ ಸಾಂಧ್ರಕಗಳು: ಪಿಎಂ ಕೇರ್ಸ್ನಿಂದ 5 ಲಿ. ಸಾಮರ್ಥ್ಯದ 2,698 ಹಾಗೂ ಸಿಎಸ್ಆರ್ ಅಡಿ 2,434 ಸೇರಿ ಒಟ್ಟು 5,132 ಆಮ್ಲಜನಕ ಸಾಂಧ್ರಕಗಳಿವೆ. 10 ಲಿ. ಸಾಮರ್ಥ್ಯದ ಸಿಎಸ್ಆರ್ಯುಡಿ 1,062 ಆಮ್ಲಜನಕ ಸಾಂಧ್ರಕಗಳು ಬಂದರೆ, 1,829 ಆಮ್ಲಜನಕ ಸಾಂಧ್ರಕಗಳನ್ನು ನಿಗಮ ಖರೀದಿಸಿದೆ. ಒಟ್ಟು 10 ಲೀ. ಸಾಮರ್ಥ್ಯದ 2,891 ಆಮ್ಲಜನಕ ಸಾಂಧ್ರಕಗಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ನಿಗಮ ಕಳುಹಿಸಿದೆ. ಈ ಎಲ್ಲ ಸಾಂಧ್ರಕಗಳನ್ನು ರೋಗಿಗಳಿಗೆ ಬಳಸಲು ತಯಾರಿ ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿ ಸೋಂಕಿತ ಪ್ರಕರಣಗಳು ಪ್ರತಿನಿತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಕರೊನಾ ಸಂಬಂಧಿಸಿದ ಔಷಧ ಮತ್ತು ಪರಿಕರಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಕೇಂದ್ರದ ಶಿಫಾರಸಿನಂತೆ ವೆಂಟಿಲೇಟರ್, ಆಕ್ಸಿಜನ್ ಸಾಂಧ್ರಕಗಳು, ಆಕ್ಸಿಜನ್ ಸಿಲಿಂಡರ್ಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. | ಲತಾ ಕುಮಾರಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಎಂಡಿ
11,559 ಆಕ್ಸಿಜನ್ ಸಿಲಿಂಡರ್ಸ್: ಪಿಎಂ ಕೇರ್ಸ್ನಿಂದ ಇದುವರೆಗೆ 8,149 ಹಾಗೂ ಸಿಎಸ್ಆರ್ನಡಿ 260 ಆಕ್ಸಿಜನ್ ಸಿಲಿಂಡರ್ಗಳು ನಿಗಮಕ್ಕೆ ಬಂದಿವೆ. 3,150 ಸಿಲಿಂಡರ್ಗಳನ್ನು ನಿಗಮ ಖರೀದಿಸಿ ದಾಸ್ತಾನು ಮಾಡಿಕೊಟ್ಟಿದೆ. ಗೋದಾಮಿನಲ್ಲಿ ದಾಸ್ತಾನು ಇರುವುದರಿಂದ ಕರೊನಾಕ್ಕೆ ತುತ್ತಾಗಿ ಉಸಿರಾಡಲು ಕಷ್ಟಪಡುವ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಸಾಧ್ಯವಾಗಲಿದೆ. 2ನೇ ಅಲೆ ಸಂದರ್ಭ ಕೆಲ ಆಮ್ಲಜನಕ ಸಾಂಧ್ರಕಗಳನ್ನು ಬಳಸಲಾಗಿತ್ತು. ಮೂರನೇ ಅಲೆಯಲ್ಲಿ ಇವುಗಳನ್ನು ಬಳಸಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರದ ಆದೇಶ ಪಾಲನೆ: ದೆೇಶದಲ್ಲಿ ಲಕ್ಷಾಂತರ ಮಂದಿ ಒಮಿಕ್ರಾನ್ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಮುನ್ನಚ್ಚರಿಕೆವಾಗಿ ಔಷಧ ಮತ್ತು ಪರಿಕರಗಳನ್ನು ಖರೀದಿಸಿ ಸಂಗ್ರಹಿಸಬೇಕೆಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕರೊನಾಗೆ ಸಂಬಂಧಿಸಿದ ಔಷಧಗಳನ್ನು ಕೆಎಸ್ಎಂಎಸ್ಸಿಎಲ್ ಖರೀದಿ ಯಲ್ಲಿ ತೊಡಗಿದೆ. ಆಂಪೋಟೆರಿಸನ್ ಬಿ, ರೆಮ್ೆಸಿವರ್ ಮತ್ತು ಎನೋಕ್ಸಪರಿನ್ ಇಂಜೆಕ್ಷನ್ ಸೇರಿ ಇನ್ನಿತರ ಕರೊನಾ ಔಷಧಗಳನ್ನು ಖರೀದಿಸಿ, ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ. ದಾಸ್ತಾನು ಇಲ್ಲದ ಕೆಲ ಔಷಧಗಳನ್ನು ಖರೀದಿಸಲು ಈಗಾಗಲೆ ಟೆಂಡರ್ ಕರೆದು ಕಂಪನಿಗಳಿಗೆ ಕಾರ್ಯಾದೇಶ ಪತ್ರ ಕೊಡಲಾಗಿದೆ. ಒಟ್ಟಿನಲ್ಲಿ ಕರೊನಾ 3ನೇ ಅಲೆಗೆ ಈ ಬಾರಿ ಔಷಧ ಕೊರತೆ ಎದುರಾಗುವ ಸಾಧ್ಯತೆ ತೀರಾ ಕಡಿಮೆ.
ಬೆಂಗಳೂರು: ಒಮಿಕ್ರಾನ್ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ಬಿಗಿ ಕ್ರಮಗಳಿಂದ ಹಲವು ಸಭೆ, ಸಮಾರಂಭಗಳು ರದ್ದಾಗಿವೆ. ಪೂರ್ವ ನಿಗಧಿಯಾಗಿದ್ದ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಂದ ಹಿಡಿದು ರಾಜಕೀಯ ಕಾರ್ಯಕ್ರಮಗಳಿಗೂ ಒಮಿಕ್ರಾನ್ ಬಿಸಿ ತಾಗಿದೆ. ಸಮಾರಂಭ, ಕಾರ್ಯಕ್ರಮಗಳಿಗೆ ಮೊದಲೇ ಜಾಗ ಗುರುತು ಮಾಡಿಕೊಂಡು ಅದಕ್ಕೆ ಮುಂಗಡ ನೀಡಿದ್ದು ಈಗ ಸಂಘಟಕರಿಗೆ ಹೊರೆಯಾಗಿ ಪರಿಣಮಿಸಿದೆ. ಇನ್ನು ಮದುವೆ ಮಾಡಲು ಕಲ್ಯಾಣ ಮಂಟಪಗಳನ್ನು ನಿಗದಿ ಮಾಡಿಕೊಂಡಿದ್ದವರಿಗೂ ಕರೊನಾ ಕಾಡುತ್ತಿದೆ. ಕೇವಲ ನೂರು ಜನರು ಭಾಗವಹಿಸಲು ಮಿತಿ ಹೇರಿರುವ ಕಾರಣ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವುದು ಸುಮ್ಮನೆ ದುಂದು ವೆಚ್ಚಕ್ಕೆ ದಾರಿ ಎಂದು ಸರಳ ವಿವಾಹ ದಾರಿ ತುಳಿಯುವ ಸ್ಥಿತಿ ಎದುರಾಗಿದೆ. ಕಲ್ಯಾಣ ಮಂಟಪಗಳಿಗೆ ನೀಡಿರುವ ಮುಂಗಡ ಹಣ ಹಿಂಪಡೆಯುವ ನಿಟ್ಟಿನಲ್ಲಿ ಹಲವರು ಪ್ರಯತ್ನ ನಡೆಸಿದ್ದರೆ, ಇನ್ನು ಕೆಲವರು ಕನಿಷ್ಠ 1-2 ತಿಂಗಳಾದರೂ ಮುಂದೂಡಿ ದಿನಾಂಕ ನೀಡುವಂತೆ ಕಲ್ಯಾಣ ಮಂಟಪದವರಿಗೆ ದುಂಬಾಲು ಬಿದ್ದಿದ್ದಾರೆ. ಒಮಿಕ್ರಾನ್ ಎಫೆಕ್ಟ್ನಿಂದ ಸಂಘಟಕರಿಗೆ ಒಂದು ರೀತಿಯಲ್ಲಿ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ಅದು ಬೇರೆ ವಹಿವಾಟುಗಳ ಮೇಲೂ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ.
ಪೂಜಾರಗೆ ಕರೊನಾ: ಪರಿಷತ್ ಸದಸ್ಯ ಪಿ.ಎಚ್.ಪೂಜಾರಗೆ ಕರೊನಾ ಸೋಂಕು ದೃಢಪಟ್ಟಿದೆ. ವಿಜಯಪುರ ಜಿಲ್ಲೆ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ (ಎನ್ಟಿಪಿಸಿ) ಕರೊನಾ ಸ್ಪೋಟಗೊಂಡಿದ್ದು, 20 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಳ್ಳಾರಿ ನಗರದ ವಿಮ್್ಸ ವೈದ್ಯಕೀಯ ಕಾಲೇಜಿ ನಲ್ಲಿ ಎಂಬಿಬಿಎಸ್ ಓದುತ್ತಿರುವ 31 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ತಗುಲಿದೆ.
ಶಿವಮೊಗ್ಗ: ಕರೊನಾ 3ನೇ ಅಲೆ ನಿಯಂತ್ರಣ ಉದ್ದೇಶದಿಂದ ಸರ್ಕಾರ ಕೈಗೊಂಡಿರುವ ಕಠಿಣ ನಿಲುವುಗಳ ಬಗ್ಗೆ ಅಪಸ್ವರ ವ್ಯಕ್ತಪಡಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ವಿಧಿಸುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಕರೊನಾ ಸೋಂಕು ಹೆಚ್ಚುತ್ತಿದ್ದು ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿ ಬಿಗಿ ನಿಯಮಗಳ ಅವಶ್ಯಕತೆ ಇದೆ. ಆದರೆ ಬೆಂಗಳೂರು ಹೊರತುಪಡಿಸಿ ಬೇರೆಲ್ಲೂ ಪಾಸಿಟಿವಿಟಿ ಪ್ರಮಾಣ ಹೆಚ್ಚಿಲ್ಲ. ಹಾಗಾಗಿ ಉಳಿದ ಜಿಲ್ಲೆಗಳಲ್ಲಿ ಕಠಿಣ ನಿಯಮ ವಿಧಿಸುವುದರಲ್ಲಿ ಅರ್ಥವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕರೊನಾ ನಿಯಂತ್ರಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಬೆಂಗಳೂರಿನಲ್ಲಿ ಹೆಚ್ಚಿದೆ ಎಂಬ ಕಾರಣಕ್ಕೆ ಇಡೀ ರಾಜ್ಯಕ್ಕೆ ಕಠಿಣ ನಿಯಮ ಜಾರಿಗೊಳಿಸಿದ್ದು ಸರಿಯಲ್ಲ. ಈ ಬಗ್ಗೆ ಜ.6ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮನವರಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ. ಆದರೆ ತೊಂದರೆ ಕೊಡಬೇಡಿ ಎಂದು ವ್ಯಾಪಾರಿಗಳು, ಜನರು ಬೇಡಿಕೊಳ್ಳುತ್ತಿದ್ದಾರೆ. ಬಿಗಿ ನಿಯಮದಿಂದ ಎಲ್ಲ ವರ್ಗದವರಿಗೂ ಸಂಕಷ್ಟ ಎದುರಾಗಲಿದೆ. ಆ ನಿಟ್ಟಿನಲ್ಲಿ ಬೆಂಗಳೂರು ಮತ್ತು ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾತ್ರ ಬಿಗಿ ಕ್ರಮ ಕೈಗೊಳ್ಳಬೇಕಿದೆ ಎಂದರು.