ನ್ಯೂಸ್

ಕರೊನಾ ಗುಣಮುಖರ ಸಂಖ್ಯೆ ‌ಏರುತ್ತಿದೆ: ಸಚಿವ ಶ್ರೀರಾಮುಲು

ಚಾಮರಾಜನಗರ: ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಬುಧವಾರ ನಗರಕ್ಕೆ ಭೇಟಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೊನಾ ಹರಡುವಿಕೆ ನಿಯಂತ್ರಣಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ರಾಜ್ಯದಲ್ಲಿ ಕೋವಿಡ್-19 ವಿಚಾರದಲ್ಲಿ‌ ಜನರು ಸಾಕಷ್ಟು ಭಯ ಪಟ್ಟಿದ್ದಾರೆ. ಜನರಿಗೆ ಯಾವುದೇ ತೊಂದರೆಯಾಗಬಾರದು. 181 ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. 5 ಜನರು ಮರಣ ಹೊ‌ಂದಿದ್ದಾರೆ. 35 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರುತ್ತಿದೆ ಎಂದರು.

ದಯಮಾಡಿ ಸಹಕರಿಸಿ: ನಿಜಾಮುದ್ದೀನ್ ಗೆ ತೆರಳಿದ್ದ 391 ಜನರನ್ನು ಸದ್ಯಕ್ಕೆ ಗುರುತಿಸಲಾಗಿದೆ. ಇವರಲ್ಲಿ 37 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ. ಜಮಾತ್ ಗೆ ತೆರಳಿದ್ದ ತಬ್ಲಿಘಿಗಳ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಲ್ಲರೂ ಸಹಕಾರ ಕೊಡಿ.

ಕರೊನಾ ಅನ್ನು ಯಾವುದೇ ಜಾತಿಗೆ ಲೇಬಲ್ ಅಂಟಿಸುತ್ತಿಲ್ಲ. ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಪಡಿ. ನಿಮ್ಮಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದು ಮನವಿ ಮಾಡಿದರು.

ಗಿರಿಜನರಿಗೂ ಹಾಲು ವಿತರಣೆ- ಚಾಮುಲ್ ನಿಂದ ಪ್ರತಿದಿನ 10 ಸಾವಿರ ಲೀ.ಹಾಲನ್ನು ಬಡವರು, ವಲಸೆ ಮತ್ತು ಕೂಲಿ ಕಾರ್ಮಿಕರಿಗೆಗೆ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿತ್ತು. ಇದನ್ನು ಗಿರಿಜನರಿಗೂ ಗುರುವಾರದಿಂದ ನೀಡಲಾಗುವುದು. ಈ ಕುರಿತು ಸಿಎಂ ಯಡಿಯೂರಪ್ಪ ಅವರ ಬಳಿ ಮಾತಾಡಿ ಒಪ್ಪಿಗೆ ಪಡೆಯಲಾಗಿದೆ ಎಂದರು.

ಖಾಸಗಿ ಕ್ಲಿನಿಕ್ ಲೈಸೆನ್ಸ್ ರದ್ದು: ಇಡೀ ರಾಜ್ಯದಲ್ಲಿ ಖಾಸಗಿ ಕ್ಲೀನಿಕ್ ಗಳು ಬಂದ್ ಆಗಿದೆ.

ಇಂತಹ ಪರಿಸ್ಥಿತಿಯಲ್ಲಿ ಬಂದ್ ಮಾಡಬಾರದು, ಅದರಿಂದ ನಮಗೆ ಸರ್ಕಾರಿ ಆಸ್ಪತ್ರೆಗಳಿಗೆ ಒತ್ತಡ ಹೆಚ್ಚಾಗುತ್ತೆ. ಮುಚ್ಚಿರುವ ಖಾಸಗಿ ಆಸ್ಪತ್ರೆ ಗಳನ್ನ ತೆರೆಯಿರಿ, ತೆಗೆಯದಿದ್ದರೇ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ದಂಡ ಹಾಕುವುದರ ಜತೆಗೆ ಅವರ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದರು.

=====