ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಇಡೀ ವಿಶ್ವವನ್ನೇ ನಲುಗಿಸಿರುವ ಕರೊನಾ ಸೋಂಕು, ಆರ್ಥಿಕತೆ ಹಾಗೂ ಆರೋಗ್ಯ ಕ್ಷೇತ್ರದ ಮೇಲೆ ಬೀರಿರುವ ಪರಿಣಾಮಕ್ಕಿಂತ ಹೆಚ್ಚಾಗಿ ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸಿರುವುದು ಆತಂಕವನ್ನುಂಟು ಮಾಡಿದೆ. ಕೈಗಾರಿಕೆಗಳು ಹಾಗೂ ಉದ್ಯಮದ ಮೇಲೆ ಬಿದ್ದ ಬರೆ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವುದು ಒಂದೆಡೆಯಾದರೆ, ಹಳ್ಳಿ ಮತ್ತು ನಗರ ಪ್ರದೇಶಗಳನ್ನು ಕಾಡುತ್ತಿರುವ ಹಲವು ಬಗೆಯ ಸಮಸ್ಯೆಗಳಿಂದ ಸಮಾಜವೇ ಕಂಗಾಲಾಗುವಂತಾಗಿದೆ. ಜತೆಗೆ ಸರ್ಕಾರದ ಮೇಲೆ ಜವಾಬ್ದಾರಿಯೂ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡು ಆರು ತಿಂಗಳಾಗುತ್ತಿದೆ. ಈ ಅವಧಿಯಲ್ಲಿ ಸೂಕ್ಷ್ಮ ಹಾಗೂ ಸಮಗ್ರ ಆರ್ಥಿಕ ವ್ಯವಸ್ಥೆಯ ಮೇಲೆ ಬಿದ್ದಿರುವ ಹೊಡೆತ, ನಿರುದ್ಯೋಗ ಹೆಚ್ಚಳ, ಕುಸಿದ ಜಿಡಿಪಿ ಜತೆಗೆ ಇನ್ನಷ್ಟು ಸವಾಲಿನ ಪಟ್ಟಿಯೇ ಮುಂದಿದೆ.
ಎಲ್ಲೆಲ್ಲಿ ಸಮಸ್ಯೆ?: ಸಮಸ್ಯೆಗಳು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ನಗರಗಳಿಂದ ಹಳ್ಳಿಗಳ ಕಡೆಗೆ ಆದ ಮರುವಲಸೆ ಹೊಸ ತಿಕ್ಕಾಟಗಳಿಗೆ ಎಡೆ ಮಾಡಿಕೊಟ್ಟಿದೆ. ಆದಾಯ ಇಲ್ಲ, ಉಳಿತಾಯ ಇಲ್ಲ, ಆಸ್ತಿಯೂ ಇಲ್ಲ ಎಂಬುದು ಬಹುತೇಕರ ಸ್ಥಿತಿಯಾಗಿದೆ. ಇರಲು ಮನೆ, ದುಡಿಯುವ ಕೈಗೆ ಕೆಲಸ, ಕೃಷಿಗೆ ಭೂಮಿ, ಪಡಿತರಕ್ಕೆ ರೇಷನ್ ಕಾರ್ಡ್ ಹೀಗೆ ಪ್ರತಿಯೊಂದಕ್ಕೂ ಪರದಾಡುವ ಸ್ಥಿತಿ ಮರುವಲಸಿಗರಿಗೆ ಕಾಡಲಾರಂಭಿಸಿದೆ.
ಅದೇ ರೀತಿ ನಗರ ಪ್ರದೇಶದಲ್ಲಿ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಸಣ್ಣ ಪುಟ್ಟ ವ್ಯಾಪಾರಗಳು ಬಾಗಿಲು ಮುಚ್ಚಿವೆ. ಹೋಟೆಲ್ಗಳು ತೆರೆದರೂ ಉದ್ಯೋಗಿಗಳ ಸಂಖ್ಯೆ ಕಡಿತವಾಗಿವೆ. ನಿರ್ಮಾಣ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಜಾಸ್ತಿಯಾಗುತ್ತ ಹೋದಂತೆ ಅದು ಸೃಷ್ಟಿಸುವ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಈಗಿನ ಪರಿಸ್ಥಿತಿಯೂ ಅದೇ ಆಗಿದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವಂತಾಗಿದೆ. ದುಬಾರಿ ವಸ್ತುಗಳ ಖರೀದಿ ನಿಂತಿದೆ. ಆಹಾರ, ನೀರು, ಔಷಧದಂತಹ ಮೂಲ ವಸ್ತುಗಳಿಗೆ ಪರದಾಡುವ ಸ್ಥಿತಿಯನ್ನು ಕರೊನಾ ನಿರ್ಮಾಣ ಮಾಡಿದೆ.
ಎಲ್ಲೆಲ್ಲಿ ಪರಿಣಾಮ?
ಕರೊನಾ ನಂತರದ ಬದುಕು ಬಹಳ ಕಷ್ಟ. ಆದ್ದರಿಂದ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಾಗಿದೆ. ಆರ್ಥಿಕ ದುಸ್ಥಿತಿ ಜನರ ಜೀವನ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸರ್ಕಾರ ಎಲ್ಲ ವರ್ಗದವರ ಆರ್ಥಿಕ ಚಟುವಟಿಕೆ ಬೆಳೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. | ಡಾ. ಕೃಷ್ಣರಾಜು ಅರ್ಥಶಾಸ್ತ್ರಜ್ಞರು ಗ್ರಾಮಗಳ ಸಬಲೀಕರಣದಿಂದ ದೇಶ ಸದೃಢವಾಗುತ್ತದೆ ಎಂಬ ತತ್ವಕ್ಕೆ ಈಗ ಆದ್ಯತೆ ನೀಡಬೇಕಾಗಿದೆ. ಕರೊನೋತ್ತರ ಕಾಲಕ್ಕೆ ಗ್ರಾಮಗಳಲ್ಲಿ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಬೇಕಾಗಿದೆ. ರೈತರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡಬೇಕಾಗಿದೆ. ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು. ಸ್ಥಳೀಯಾಡಳಿತವನ್ನು ಇನ್ನಷ್ಟು ಗಟ್ಟಿ ಮಾಡಬೇಕು. | ಪ್ರೊ. ಐ. ಮಾರುತಿ ಪ್ರಾಧ್ಯಾಪಕರು, ಐಸೆಕ್ https://www.vijayavani.net/corona-cases-r-value-has-fallen-below-1-in-delhi/