ತಿ.ನರಸೀಪುರ: ಅಭಿವೃದ್ಧಿ ವಿಷಯ ಚರ್ಚಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಕರೆ ಮಾಡಿದಾಗ ಸ್ವೀಕರಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಚ್.ಮಂಜುನಾಥ್, ವೈದ್ಯರು ಜನಪ್ರತಿನಿಧಿಗಳ ಕರೆ ಸ್ವೀಕರಿಸದೆ ಉದಾಸೀನ ತೋರುತ್ತಿದ್ದಾರೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಅಧಿಕಾರಿಗಳ ವಿರುದ್ಧ ಗರಂ ಆದರು.
ಜನಪ್ರತಿನಿಧಿಗಳ ಕರೆ ಸ್ವೀಕರಿಸಿ ಮಾತನಾಡುವಷ್ಟು ಸೌಜನ್ಯವನ್ನು ತಾಲೂಕು ಮಟ್ಟದ ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಅಲ್ಲದೆ ಸರ್ಕಾರದ ಸವಲತ್ತುಗಳನ್ನು ವಿತರಿಸುವಾಗ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ತಾಕೀತು ಮಾಡಿದರು.
ತಾಲೂಕಿನಲ್ಲಿ ಕರೊನಾ ಸೋಂಕಿತರು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಕ್ರಮ ವಹಿಸಬೇಕು. ಅಲ್ಲದೆ ಪಾಸಿಟಿವ್ ಬಂದು ಗುಣಮುಖರಾಗಿರುವ ರೋಗಿಗಳಿಂದ ಪ್ಲಾಸ್ಮಾ ಪಡೆಯುವ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ರಕ್ತ ದಾನದಂತೆ ಪ್ಲಾಸ್ಮಾ ದಾನ ಉತ್ತಮ ಕಾರ್ಯ. ಈ ಬಗ್ಗೆ ಹೆಚ್ಚಿನ ಪ್ರಮಾಣದ ಪ್ರಚಾರದ ಅಗತ್ಯ ಇದೆ ಎಂದು ಮತ್ತೊಬ್ಬ ಶಾಸಕ ಅಶ್ವಿನ್‌ಕುಮಾರ್ ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ತಾಲೂಕಿನಲ್ಲಿ ಈವರೆಗೆ 688 ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದು, ಈ ಪೈಕಿ 510 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 146 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನಿಂದ 17ಜನ ಮೃತ ಪಟ್ಟಿದ್ದಾರೆ. ತಾತ್ಕಾಲಿಕವಾಗಿ ತೆರೆದಿರುವ ಕೋವಿಡ್ ಸೆಂಟರ್‌ನಲ್ಲಿ ಈ ವರೆಗೆ 262 ಜನ ದಾಖಲಾಗಿದ್ದು, ಈಗ 29 ಸೋಂಕಿತರಿದ್ದಾರೆ. ಆಸ್ಪತ್ರೆಯಲ್ಲಿ 3 ಡಯಾಲಿಸಿಸ್ ಯಂತ್ರಗಳಿದ್ದು ದಿನಕ್ಕೆ 9 ಜನರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ವಿವರ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು 100 ದಿನಗಳ ಕಾಲ ಶಾಲೆಯಿಂದ ಹೊರಗುಳಿದ ಕಾರಣ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸ್ವಲ್ಪ ಇಳಿಮುಖವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಸಭೆಗೆ ತಿಳಿಸಿದರು. ಇದರಿಂದ ಕೆಂಡಾಮಂಡಲರಾದ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಚ್.ಮಂಜುನಾಥ್, ಎಲ್ಲದಕ್ಕೂ ಕೋವಿಡ್ ನೆಪ ಹೇಳಬೇಡಿ. ಹುಣಸೂರಿಗೆ ಎ ಗ್ರೇಡ್ ಹಾಗೂ ಎಚ್.ಡಿ.ಕೋಟೆಗೆ ಬಿ ಗ್ರೇಡ್ ಬಂದಿವೆ. ಅಲ್ಲಿ ಕೋವಿಡ್ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಮಧ್ಯೆ ಪ್ರವೇಶಿದ ಯತೀಂದ್ರ ಸಿದ್ದರಾಮಯ್ಯ, ಮಕ್ಕಳಿಗೆ ಸರಿಯಾಗಿ ಪಾಠ ಮಾಡದ ಕಾರಣ ಫಲಿತಾಂಶದಲ್ಲಿ ಇಳಿಮುಖ ವಾಗಿದೆ. ಮುಂದೆ ಈಗಾಗುವುದು ಬೇಡ. ಪುನರಾವರ್ತನೆಯಾದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಶಾಸಕರ ಗಮನಕ್ಕೆ ತಾರದೆ ಶಿಕ್ಷಣ ಇಲಾಖೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿದೆ ಎಂದು ಶಾಸಕ ಅಶ್ವಿನ್ ಕುಮಾರ್ ಕೆಂಡಾಮಂಡಲರಾದರು.
ರೀ ಸ್ವಾಮಿ.. ನಮ್ಮನ್ನು ಏನು ಅಂತ ತಿಳಿದಿದ್ದೀರಾ…ನಾವೇನು ಕಳ್ಳೇಪುರಿ ತಿನ್ನಲು ಬರುತ್ತೇವೆ ಎಂದುಕೊಂಡಿದ್ದೀರಾ. ಸರ್ಕಾರದ ಕಾರ್ಯಕ್ರಮಕ್ಕೆ ಯಾಕ್ರಿ ಶಾಸಕರನ್ನೇ ಕರೆಯುತ್ತಿಲ್ಲ ಎಂದು ಕಿಡಿಕಾರಿದರು. ಇದಕ್ಕೆ ದನಿಗೂಡಿಸಿದ ಯತೀಂದ್ರ, ಜನರ ದುಡ್ಡಿಂದಲೇ ಶಾಲಾ ಮಕ್ಕಳಿಗೆ ಪುಸ್ತಕ ನೀಡಲಾಗುತ್ತಿದೆ. ಇದನ್ನು ಜನಪ್ರತಿನಿಧಿಗಳಿಂದಲೇ ಕೊಡಿಸಬೇಕು. ಅಧಿಕಾರಿಗಳೇ ಎಲ್ಲವನ್ನೂ ಮಾಡಿದರೆ ನಾವ್ಯಾಕೇ ಇರೋದು ಎಂದು ತರಾಟೆಗೆ ತೆಗೆದುಕೊಂಡರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಮ್ಮ ಅಧೀನ ಅಧಿಕಾರಿಯನ್ನು ಸಭೆಗೆ ಕಳುಹಿಸಿರುವ ಬಗ್ಗೆ ಮಾಹಿತಿ ಪಡೆದ ಶಾಸಕದ್ವಯರು, ಅವರನ್ನೂ ತರಾಟೆಗೆ ತೆಗೆದುಕೊಂಡರು.
ಇಬ್ಬರು ಶಾಸಕರು ಬಂದಿದ್ದರೂ ಅಧಿಕಾರಿ ಕುಂಟು ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ. ಬೇರೆ ಸಭೆ ಇದ್ದರೆ ಅನುಮತಿ ಪಡೆದು ಹೋಗಬೇಕೆನ್ನುವ ಸೌಜನ್ಯವೂ ಅವರಿಗಿಲ್ಲವೇ ಎಂದು ಕಿಡಿಕಾರಿದರು.
ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವಿವರ ಮಂಡಿಸಿದರು.
ಜಿಪಂ ಸದಸ್ಯ ಜೈಪಾಲ್ ಭರಣಿ, ತಾಪಂ ಅಧ್ಯಕ್ಷ ಹ್ಯಾಕನೂರು ಉಮೇಶ್, ಸದಸ್ಯ ರಮೇಶ್, ಇಒ ಜೆರಾಲ್ಡ್ ರಾಜೇಶ್, ತಹಸೀಲ್ದಾರ್ ಡಿ.ನಾಗೇಶ್, ಸಿಪಿಐ ಎಂ.ಆರ್.ಲವ, ಸಿಡಿಪಿಒ ಬಸವರಾಜು, ಪುರಸಭೆ ಮುಖ್ಯಾಧಿಕಾರಿ ಆರ್.ಅಶೋಕ್, ಸದಸ್ಯ ಸೋಮು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.