ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗತ ವೈಭವವನ್ನು ಪಡೆಯಲು ಹೊಸ ಕಾರ್ಯತಂತ್ರ ಸಿದ್ದಪಡಿಸುತ್ತಿದ್ದೆ. ಈ ಪ್ರದೇಶವನ್ನು ಗಂಭೀರವಾಗಿ ಪರಿಗಣಿಸಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ 10 ವರ್ಷಗಳಲ್ಲಿ ಕರಾವಳಿಯಲ್ಲಿ ಬಿಜೆಪಿ ಸಂಸದರು, ಶಾಸಕರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಈ ಅವಧಿಯಲ್ಲಿ ಅವರು ಈ ಪ್ರದೇಶದ ಜನರಿಗೆ ಯಾವುದೇ ಹೊಸ ದೊಡ್ಡ ಯೋಜನೆ ತಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಯೋಜನೆಯ ಹಳೇ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ರೈಲ್ವೆ ವಿಭಾಗ, ಬಂದರು ಸಹಿತ ವಿವಿಧ ಬೃಹತ್ ಸಂಸ್ಥೆ, ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಂಗಳೂರಿನ ಹಿತದೃಷ್ಟಿಯಿಂದ ಹೊಸ ರೀತಿಯ ರಾಜಕೀಯ ಆರಂಭಿಸಬೇಕಾಗಿದೆ. ವಿಭಿನ್ನ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಸಂದರ್ಭ ಆರೋಪ, ಮನಸ್ತಾಪ ಎಲ್ಲ ಇರಲಿ, ಉಳಿದ ಸಂದರ್ಭದಲ್ಲಿ ರಾಜಕೀಯ ಮರೆತು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡೋಣ, ವಿಷನರಿ(ದೂರದೃಷ್ಟಿಯ) ರಾಜಕಾರಣ ಮಾಡೋಣ. ಈ ವಿಷಯದಲ್ಲಿ ಬಿಜೆಪಿಯಲ್ಲಿ ಅನಂತ್ ಕುಮಾರ್ ಒಳ್ಳೆಯ ಪ್ರಯತ್ನ ನಡೆಸಿದ್ದರು ಎಂದರು.
- ಚುನಾವಣೆ ಮೇಲೆ ಪರಿಣಾಮ ಇರಬಹುದು
ಮುಡಾ, ವಾಲ್ಮೀಕಿ ನಿಗಮ ಹಗರಣ, ಆರೋಪ ಪರಿಣಾಮ ಸಮೀಪದಲ್ಲಿರುವ ಚುನಾವಣೆಗಳ ಮೇಲೆ ಸ್ವಲ್ಪ ಮಟ್ಟಿನಲ್ಲಿ ಇರಬಹುದು. ಆದರೆ ಆಡಳಿತ ಯಾರ ಕೈಯಲ್ಲಿ ಇದ್ದರೂ ಆರೋಪಗಳು ಇರುತ್ತವೆ. ಆದರೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಮೇಲೆ ಯಾವುದೇ ಸಮಸ್ಯೆ ಉಂಟಾಗದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಸುಮಾರು 22 ಮಂದಿ ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದರು. ಪಕ್ಷದ ಶಾಸಕರು ಸಾಂದರ್ಭಿಕವಾಗಿ ನುಡಿದ ಮಾತನ್ನು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವ ರೀತಿಯಲ್ಲಿ ಬಿಂಬಿಸಲಾಗುತ್ತದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
- ಜಿಲ್ಲೆ/ ಬ್ಲಾಕ್ ಅಧ್ಯಕ್ಷರ ಬದಲಾವಣೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಪಕ್ಷದ ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ಪಕ್ಷ ಸಂಘಟನೆ ಸಂಬಂಧಿಸಿ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಿದ್ದು, ಅವರು ತ್ವರಿತವಾಗಿ ಕೆಲಸ ನಡೆಸಬೇಕಾಗಿದೆ. ಅಗತ್ಯ ಇರುವ ಎಲ್ಲ ಕಡೆ ಪಕ್ಷದ ಜಿಲ್ಲಾ ಅಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರ ಬದಲಾವಣೆಗೆ ಕೈ ಹಾಕಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಹೇಳಿದರು.
ಮುಂದಿನ ಒಂದೂವರೆ ತಿಂಗಳಲ್ಲಿ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ದೀರ್ಘಾವಧಿಯಿಂದ ಹುದ್ದೆಯಲ್ಲಿ ಇರುವವರನ್ನು ಕೂಡ ಪರಿಗಣಿಸಲಾಗುವುದು ಎಂದರು.
- ಸ್ಪರ್ಧೆ ಖಚಿತ
ವಿಧಾನಪರಿಷತ್ ಉಪ ಚುನಾವಣೆಗೆ ಸಂಬಂಧಿಸಿ ಕೂಡ ಮಂಗಳೂರಿನಲ್ಲಿ ಚರ್ಚೆ ನಡೆಸುತ್ತಿದ್ದೇವೆ. ಇಲ್ಲಿ ನಮಗೆ ನಂಬರ್ ಕಡಿಮೆ ಇರಬಹುದು. ಆದರೆ ಸ್ಪರ್ಧೆ ಖಚಿತವಾಗಿದೆ. ಚುನಾವಣೆಯಲ್ಲಿ ಯಾವುದೇ ಆಕಸ್ಮಿಕಗಳು ಸಂಭವಿಸಬಹುದು ಎನ್ನುವುದಕ್ಕೆ ನಮ್ಮ ಮುಂದೆ ಹಲವು ದೃಷ್ಟಾಂತಗಳಿವೆ. ಬಹುಮತವೇ ಇಲ್ಲದ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಿರುವುದನ್ನು ಕರ್ನಾಟಕ, ಮಹಾರಾಷ್ಟ್ರದಲ್ಲಿ ಕೂಡ ಕಂಡಿದ್ದೇವೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್, ಮಂಜುನಾಥ ಭಂಡಾರಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಜಯ ಮುಳುಗುಂದ, ಬಾಲರಾಜ್, ಸತ್ಯನಾರಾಯಣ, ಇನಾಯತ್ ಅಲಿ, ಎಂ.ಎಸ್. ಮುಹಮ್ಮದ್, ಉಪಸ್ಥಿತರಿದ್ದರು.