ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಕಡೂರು ತಾಪಂ ಸಭಾಂಗಣದಲ್ಲಿ ಪ್ರಶಂಸನೀಯ ಪತ್ರಗಳನ್ನು ತಾಪಂ ಇಒ ಸಿ.ಆರ್.ಪ್ರವೀಣ್ ಮತ್ತು ದಿನೇಶ್ ಸಮ್ಮುಖದಲ್ಲಿ ಪಿಡಿಒ ಮತ್ತು ಸಿಬ್ಬಂದಿಗೆ ವಿತರಿಸಲಾಯಿತು. 
ನ್ಯೂಸ್

ಕರವಸೂಲಾತಿಯಲ್ಲಿ ದಾಖಲೆ

ಕಡೂರು: ತೆರಿಗೆಯ ಪರಿಷ್ಕರಣೆ ಮತ್ತು ತಂತ್ರಾಂಶದ ವೈಜ್ಞಾನಿಕ ವಸೂಲಾತಿ ಪರಿಣಾಮದಿಂದ ತಾಲೂಕಿನಾದ್ಯಂತ 60 ಗ್ರಾಪಂಗಳ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ 2024-25ನೇ ಸಾಲಿನಲ್ಲಿ ಒಟ್ಟು 7.78 ಕೋಟಿ ರೂ. ಮೊತ್ತದಷ್ಟು ಕರ ಸಂಗ್ರಹಣೆಗೊಂಡು ಈ ಬಾರಿ ಶೇ.103.12ರಷ್ಟು ವಸೂಲಾತಿಯಿಂದ ಐತಿಹಾಸಿಕ ದಾಖಲೆಯನ್ನು ಪಂಚಾಯಿತಿಗಳು ಸಾಧಿಸಿವೆ.

ಬಯಲುಸೀಮೆ ಪ್ರದೇಶವಾದ ತಾಲೂಕಿನಲ್ಲಿ ಕರ ವಸೂಲಾತಿಯಲ್ಲಿ ಸಾಕಷ್ಟು ಅಪವಾದಗಳು ಕೇಳಿಬರುತ್ತಿದ್ದವು. ಈ ಹಿಂದೆ ಮ್ಯಾನ್ಯುಯಲ್ ಪದ್ಧತಿ ವ್ಯವಸ್ಥೆಯಿಂದ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಶೇ.50ರಷ್ಟು ಗುರಿ ತಲುಪುವುದೇ ದೊಡ್ಡ ಸಾಧನೆಯಂತಾಗಿತ್ತು. ಇದರ ನಡುವೆ ಪಂಚಾಯಿತಿ ಅಭಿವೃದ್ಧಿ ವ್ಯವಸ್ಥೆಯನ್ನು ಮುನ್ನಡೆಸುವುದೇ ಸವಾಲಿನ ಕೆಲಸವಾಗಿತ್ತು. ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಿಸಿಕೊಂಡರೆ ಮಾತ್ರ ಪಂಚಾಯಿತಿಗಳ ಅಭಿವೃದ್ಧಿಗೊಳಿಸಲು ಸಾಧ್ಯ ಎಂಬ ನಿಟ್ಟಿನಲ್ಲಿ ಕೆಲವು ದೋಷಗಳು ಸೇರಿದಂತೆ ಅಲ್ಲಲ್ಲಿ ಆಗುತ್ತಿದ್ದ ಗೋಲ್ಮಾಲ್ ವ್ಯವಸ್ಥೆಗೆ ಪಂಚಾಯತ್ ರಾಜ್ ಇಲಾಖೆ ಕಡಿವಾಣ ಹಾಕಿದ ಪರಿಣಾಮದಿಂದ ತೆರಿಗೆ ವಸೂಲಾತಿ ಪದ್ಧತಿಯನ್ನು ವಿಶೇಷ ಆಂದೋಲನದ ಮೂಲಕ ಮತ್ತು ಸುಧಾರಣೆಯೊಂದಿಗೆ ಪಂಚತಂತ್ರ 2.0 ತಂತ್ರಾಂಶ ಅಳವಡಿಸಿಕೊಂಡು ಪಿಒಎಸ್ ಯಂತ್ರದ ಮೂಲಕ ರಶೀದಿ ನೀಡಿ ವಸೂಲಾತಿಗೆ ಮುಂದಾಗಿರುವುದರಿಂದ ನಿರೀಕ್ಷೆಗೂ ಮೀರಿ ಗುರಿ ತಲುಪಲು ಸಾಧ್ಯವಾಗಿದೆ. 2024-25ನೇ ಸಾಲಿಗೆ ಚಾಲ್ತಿ ತೆರಿಗೆಯು 7.54 ಕೋಟಿ ರೂ. ನಿಗದಿಗೊಂಡಿತ್ತು. ಇದೀಗ 7.78 ಕೋಟಿ ರೂ. ವಸೂಲಾತಿ ಮಾಡಲಾಗಿದೆ.