ನ್ಯೂಸ್

ಕರ ವಸೂಲಿಯಲ್ಲಿ ಹೆಚ್ಚಿನ ಪ್ರಗತಿಗೆ ಸಿಇಒ ತಾಕೀತು

ಚಿತ್ರದುರ್ಗ: ಕರ ವಸೂಲಿ ಕಡಿಮೆಯಾಗಿರುವ ಗ್ರಾಪಂಗಳಲ್ಲಿ ಜಾಗೃತಿ ಜಾಥಾ,ಟಾಂಟಾಂ,ಸ್ವಚ್ಛ ವಾಹಿನಿ ವಾಹನ ಮೂಲಕ ಕರ ಪಾವತಿಗೆ ಆಸ್ತಿ ಮಾಲೀಕರಲ್ಲಿ ಜಾಗೃತಿ ಮೂಡಿಸುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಪಿಡಿಒಗಳಿಗೆ ತಾಕೀತು ಮಾಡಿದರು.

ಜಿಪಂದಲ್ಲಿ ಗುರುವಾರ ಕಡಿಮೆ ಕರ ವಸೂಲಿ ಮಾಡಿರುವ ಗ್ರಾಪಂ ಪಿಡಿಒ ಮತ್ತು ಕರ ವಸೂಲಿಗಾರರ ಸಭೆಯಲ್ಲಿ ಮಾತನಾಡಿ,ಜನರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ಕರ ವಸೂಲಿ ಮಾಡುವ ಹೊಣೆಗಾರಿಕೆ ಗ್ರಾಪಂಗಳ ಮೇಲಿದೆ. ಈ ನಿಟ್ಟಿನಲ್ಲಿ ಆರ್ಥಿಕ ಸಾಲಿನ ಅಂತ್ಯದೊಳಗೆ ನಿರೀಕ್ಷಿತ ಗುರಿ ಸಾಧಿಸಬೇಕು.

ಜಿಲ್ಲೆಯ 189 ಗ್ರಾಪಂಗಳಲ್ಲಿ ಈವರೆಗೂ ಶೇ.33.80 ಕರ ವಸೂಲಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆ ಪ್ರಗತಿ ತುಂಬಾ ಕಡಿಮೆ ಇದೆ. ಆದ್ದರಿಂದ ಕಡಿಮೆ ಕರ ವಸೂಲಾಗಿರುವ ಗ್ರಾಪಂ ವ್ಯಾಪ್ತಿಯಲ್ಲಿ ಕರ ಪಾವತಿಗೆ ಜನರ ಮನವೊಲಿಸ ಬೇಕು. ಪ್ರತಿ ಮನೆ, ಮನೆಗೂ ಭೇಟಿ ನೀಡಿ ತೆರಿಗೆ ಸಂಗ್ರಹಿಸಬೇಕು. ಇನ್ನೂಂದು ತಿಂಗಳವೊಳಗೆ ಕಡ್ಡಾಯವಾಗಿ ಕರ ವಸೂಲಿ ಪ್ರಮಾಣ ಶೇ.80 ತಲುಪಬೇಕೆಂದು ಪಿಡಿಒ ಹಾಗೂ ಕರ ವಸೂಲಿಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸನ್ಮಾನ,ಶಿಸ್ತು ಕ್ರಮದ ಎಚ್ಚರಿಕೆ

ಹೆಚ್ಚಿನ ಪ್ರಮಾಣದಲ್ಲಿ ಕರ ವಸೂಲಿಗೆ ಮಾಡುವ ಗ್ರಾಪಂಗಳ ಪಿಡಿಒ,ಬಿಲ್ ಕಲೆಕ್ಟರ್‌ಗಳನ್ನು ಜಿಪಂದಿಂದ ಸನ್ಮಾನಿಸಲಾಗುವುದು ಎಂ ದು ಸಿಇಒ ಹೇಳಿದರು. ನಿರೀಕ್ಷಿತ ಗುರಿ ಸಾಧಿಸದೆ ನಿರ್ಲಕ್ಷೃ ತೋರುವ ಪಿಡಿಒ,ಬಿಲ್ ಕಲೆಕ್ಟರ್‌ಗಳ ವಿರುದ್ಧ ಶಿಸ್ತುಕ್ರಮವನ್ನೂ ಜರುಗಿಸ ಲಾಗುವುದೆಂದು ಎಚ್ಚರಿಸಿದರು. ಜಿಪಂ ಉಪ ಕಾರ‌್ಯದರ್ಶಿ ಕೆ.ತಿಮ್ಮಪ್ಪ,ಸಹಾಯಕ ಕಾರ‌್ಯದರ್ಶಿ ಎನ್.ರವಿ,ಸಹಾಯಕ ನಿರ್ದೇಶಕ ದಾದಾ ಪೀರ್,ಸಹಾಯಕ ಡಿಪಿಎಂಯು ಸೈಯಿದಾ ಪಿಜಾ ಇರಮ್ ಇತರರು ಇದ್ದರು.