ನ್ಯೂಸ್

ಕಬ್ಬು ಬೆಳೆಗಾರರಿಂದ ಪ್ರತಿಭಟನೆ

ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ.ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರ ಬೆಲೆ ನಿಗದಿ ಮಾಡಿರುವ ಎಫ್‌ಆರ್‌ಪಿ ಪರಿಶೀಲಿಸಿ ರಾಜ್ಯ ಸರ್ಕಾರದ ಸಲಹಾ ಬೆಲೆ ಕಾಯ್ಕೆಯಡಿ ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಪ್ರತಿ ಟನ್ ಕಬ್ಬಿಗೆ 4000 ರೂ. ನಿಗದಿ ಮಾಡಬೇಕು. ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಸಬೇಕು. 2023-24ನೇ ಸಾಲಿನ ಉಪ ಉತ್ಪನ್ನಗಳ ಲಾಭಾಂಶ ಹಂಚಿಕೆ ಮಾಡಬೇಕು. ಸಕ್ಕರೆ ಇಳುವರಿಯಲ್ಲಿ ಕಡಿಮೆ ತೋರುತಿದ್ದು ಜಿಲ್ಲಾಡಳಿತ ಅಧಿಕಾರಿಗಳ ತಂಡ ರಚನೆ ಮಾಡಿ ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ ಭಾಗಗಳಲ್ಲಿ ಅತೀ ಹೆಚ್ಚು ತಂಬಾಕು ಬೆಳೆಗಳನ್ನೇ ನಂಬಿದ್ದಾರೆ. ತಂಬಾಕು ಬೆಲೆ ಕುಸಿತವಾದ್ದರಿಂದ ತಂಬಾಕು ಮಂಡಳಿ ಹಾಗೂ ಜಿಲ್ಲಾಡಳಿತ ಸ್ಥಳೀಯ ಸಂಸದರೊಂದಿಗೆ ಸಭೆ ನಡೆಸಿ ಸೂಕ್ತ ನ್ಯಾಯ ಒದಗಿಸಬೇಕು. ಮೈಸೂರು-ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು. ಅಸಹಜ ಕಾಡು ಪ್ರಾಣಿ ಸಾವನ್ನಪ್ಪಿದರೆ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು. ಪ್ರಾಣಿ ಸಂಘರ್ಷದಿಂದ ರೈತ ಸಾವನ್ನಪ್ಪಿದರೆ ಭಿಕ್ಷೆ ರೂಪದಲ್ಲಿ ಕೊಡುತ್ತಿರುವ ಪರಹಾರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಬೇಕು. ನಂಜನಗೂಡು ತಾಲೂಕು ಏತ ನೀರಾವರಿ ವಿಳಂಭವಾಗಿದ್ದು ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.

ಭತ್ತ ಕಟಾವಿಗೆ ಮುಂಚಿತವಾಗಿ ಖರೀದಿ ಕೇಂದ್ರ ತೆಗೆದು ಎಂಸ್‌ಪಿ ಬೆಲೆಗಿಂತ ಹೆಚ್ಚುವರಿವಾಗಿ 500 ರೂ. ಸಹಾಯ ಧನ ನೀಡಬೇಕು. ಬನ್ನೂರು ಭಾಗದಲ್ಲಿ ಖಾಸಗಿ ಕೊಳವೆ ಬಾವಿಯಿಂದ ಕೊಡಯ್ಸ ಬಿಲ್ವರಿ ಫ್ಯಾಕ್ಟರಿ ಅಕ್ರಮವಾಗಿ ಶುದ್ಧೀಕರಣ ಇಲ್ಲದ ನೀರನ್ನು ಖಾಸಗಿ ಕೊಳವೆ ಬಾವಿಗಳಿಂದ ಹಾಗೂ ನಾಲೆಗಳ ಮೂಲಕ ಅಕ್ರಮ ನೀರನ್ನು ಕಾರ್ಖಾನೆಗೆ ತರುವುದನ್ನು ನಿಲ್ಲಿಸಬೇಕು. ಜಿಲ್ಲೆಯ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳಲ್ಲಿ ಹಳೆ ತೂಕದ ಯಂತ್ರ ಬದಲಾಯಿಸಿ ಡಿಜಿಟಲ್ ಯಂತ್ರ ಉಪಕರಣಗಳನ್ನು ಅಳವಡಿಸಬೇಕು. ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಬಾಳೆ ಬೆಳೆದಿದ್ದು, ದರ ಕುಸಿತವಾದ್ದರಿಂದ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಎಪಿಎಂಸಿಗಳಲ್ಲಿ ಹೊರ ರಾಜ್ಯದ ಬಾಳೆ ಖರೀದಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹಾಡ್ಯ ರವಿ, ಮಹೇಶ್, ಸ್ವಾಮಿರಾಜ್, ಕುಮಾರ್, ಅಂಕನಹಳ್ಳಿ ತಿಮ್ಮಪ್ಪ, ಸಿದ್ದ, ರವಿ. ಶೋಭಾ, ಗುರುಮಲ್ಲಪ್ಪ, ಚಿಕ್ಕಸ್ವಾಮಿ, ಮಹದೇವಸ್ವಾಮಿ ಸೇರಿ ಇತರರಿದ್ದರು.